
ಸಂಜೆವಾಣಿ ವಾರ್ತೆ
ಹೊಸಪೇಟೆ : ಹೊಸಪೇಟೆ ನಗರಸಭೆಯ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇರೆಗೆ ಜಿಲ್ಲಾಧಿಕಾರಿ ಅವರು ಮಾಡಿದ್ದ ನಾಲ್ವರು ಸಿಬ್ಬಂದಿಯ ಅಮಾನತು ಆದೇಶಕ್ಕೆ ಹೈಕೋರ್ಟ್ ಧಾರವಾಡ ಪೀಠ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
‘ದೊಡ್ಡ ಪ್ರಮಾಣದಲ್ಲಿ ಕರ್ತವ್ಯಚ್ಯುತಿ ಮಾಡಿದ್ದರೆ ಮಾತ್ರ ಸರ್ಕಾರಿ ಸಿಬ್ಬಂದಿಯನ್ನು ಅಮಾನತುಗೊಳಿಸಬಹುದು ಎಂಬ ನಿಯಮ ಇದೆ. ಇಲ್ಲಿ ಸಿಬ್ಬಂದಿಯಿಂದ ದೊಡ್ಡ ಪ್ರಮಾಣದಲ್ಲಿ ಕರ್ತವ್ಯಲೋಪ ಆಗಿಲ್ಲ. ಹೆಚ್ಚುವರಿ ಸರ್ಕಾರಿ ವಕೀಲರು ದಾಖಲೆಗಳನ್ನು ಪರಿಶೀಲಿಸಿ, ಆಕ್ಷೇಪ ಸಲ್ಲಿಸುವ ತನಕ ಕರ್ತವ್ಯಚ್ಯುತಿ ಎಷ್ಟರಮಟ್ಟಿಗೆ ಆಗಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಸರ್ಕಾರಿ ವಕೀಲರು ಮುಂದಿನ ವಿಚಾರಣಾ ದಿನಾಂಕವಾದ ಸೆ.13ರಂದು ತಮ್ಮ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲಿಯವರೆಗೆ ಅಮಾನತು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ‘ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಮಾನತು ಆದೇಶ ಪ್ರಶ್ನಿಸಿ ಸಿಬ್ಬಂದಿ ಎನ್.ಯಲ್ಲಪ್ಪ, ಡಿ.ಎಚ್.ಸುರೇಶ್ ಬಾಬು ಮತ್ತು ಎಚ್.ಶಂಕರ್ ಅವರು ವಕೀಲ ಸಬೀಲ್ ಅಹ್ಮದ್ ಅವರ ಮೂಲಕ ಸೋಮವಾರ ಬೆಳಿಗ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಎನ್.ನಾಗಪ್ರಸನ್ನ ಅವರ ಪೀಠ ಅಮಾನತು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ಮುಂದಿನ ವಿಚಾರಣೆಯನ್ನು ಇದೇ 13ಕ್ಕೆ ನಿಗದಿಪಡಿಸಿತು.
ನಕಲಿ ಪತ್ರ ವಾದ?
ಏಳು ತಿಂಗಳ ಹಿಂದೆ ಅಂದು ಸಚಿವರಾಗಿದ್ದವರು ಹಾಗೂ ಅವರ ಬೆಂಬಲಿಗರು ಸಿ.ಸಿ.ಟಿ.ವಿ.ಕ್ಯಾಮೆರಾ ಬಂದ್ ಮಾಡಿಸಿ, ಕಡತಗಳನ್ನು ಸಾಗಿಸಿದ್ದಾರೆ ಎಂಬ ದೂರು ನೀಡಿ ಬರೆಯಲಾದ ಪತ್ರ ತಮ್ಮದಲ್ಲ. ಅಲ್ಲಿರುವ ಸಹಿಗೂ, ತಮ್ಮ ಸಹಿಗೂ ತಾಳೆ ಆಗುತ್ತಿಲ್ಲ. ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನೂ ನೀಡಲಾಗಿದೆ. ತಮ್ಮದಲ್ಲದ ತಪ್ಪಿಗೆ ಅಮಾನತು ಶಿಕ್ಷೆ ವಿಧಿಸಿದ್ದು ಸರಿಯಲ್ಲ ಎಂದು ವಾದವನ್ನು ಅರ್ಜಿದಾರರ ಪರವಾಗಿ ಮಂಡಿಸಲಾಯಿತು. ಹೀಗಾಗಿ ಅಮಾನತು ಆದೇಶಕ್ಕೆ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿರಬಹುದು. ಹೆಚ್ಚುವರಿ ಸರ್ಕಾರಿ ವಕೀಲರು ಜಿಲ್ಲಾಧಿಕಾರಿ ಹಾಗೂ ಆಯುಕ್ತರ ಪರವಾಗಿ ನೀಡುವ ಸಾಕ್ಷ್ಯಗಳು, ದಾಖಲೆಗಳು ಮುಂದೆ ಮುಖ್ಯವಾಗುತ್ತದೆ. ಸದ್ಯ ಹೈಕೋರ್ಟ್ ಆದೇಶದಂತೆ ಅಮಾನತುಗೊಂಡವರನ್ನು ತಕ್ಷಣದಿಂದಲೇ ಮತ್ತೆ ನಗರಸಭೆಯಲ್ಲಿ ಕೆಲಸಕ್ಕೆ ನಿಯೋಜಿಸಬೇಕಾಗುತ್ತದೆ‘ ಎಂದು ಅರ್ಜಿದಾರರ ಪರ ವಕೀಲ ಸಬೀಲ್ ಅಹ್ಮದ್ ತಿಳಿಸಿದರು.