ಕಡಗಂಚಿ ಗ್ರಾ.ಪಂ.ಸದಸ್ಯ ಶಿವಲಿಂಗಪ್ಪ ಗುಬಶೆಟ್ಟಿ ಕೊಲೆ ಪ್ರಕರಣ: ನಾಲ್ವರ ಬಂಧನ

ಕಲಬುರಗಿ,ನ.7-ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಪ್ಪ ತಂದೆ ಹಣಮಂತರಾವ ಗುಬಶೆಟ್ಟಿ (50) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಶರಣಬಸಪ್ಪ ಅಲಿಯಾಸ್ ಶರಣು ತಂದೆ ರಾಜಪ್ಪಾ ಮಾದಗುಂಡ, ಯೋಗಿನಾಥ ತಂದೆ ರಾಜಪ್ಪಾ ಮಾದಗುಂಡ, ಸಾಯಿನಾಥ ತಂದೆ ರಾಜಪ್ಪ ಮಾದಗುಂಡ, ಅಶೋಕ ತಂದೆ ಮರೆಪ್ಪಾ ರಾಜಾಪೂರ ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಡಗಂಚಿ ಗ್ರಾಮ ಪಂಚಾಯತಿ ಸದಸ್ಯ ಶಿವಲಿಂಗಪ್ಪ ಗುಬಶೆಟ್ಟಿ ಅವರು ನ.2 ರಂದು ರಾತ್ರಿ 8 ಗಂಟೆ ಸುಮಾರಿಗೆ ಕಲಬುರಗಿಯ ಕೈಲಾಸ ನಗರದ ಶರಣು ಭೂಸನೂರ ಅವರ ಮನೆಯ ಹತ್ತಿರ ನಿಂತಿದ್ದಾಗ ದುಷ್ಕರ್ಮಿಗಳು ಅವರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು. ಬಗ್ಗೆ ನಿತ್ಯಾನಂದ ಹಣಮಂತರಾವ ಬುಗಶೆಟ್ಟಿ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಸತೀಶ್ ಕುಮಾರ, ಡಿಸಿಪಿ ಡಿ.ಕಿಶೋರಬಾಬು, ” ಎ” ಉಪ ವಿಭಾಗದ ಎಸಿಪಿ ಅಂಶುಕುಮಾರ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆಯ ಪಿಐ ಅರುಣ್ ಎಸ್.ಮುರಗುಂಡಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದಣ್ಣಾ, ಸಿಕ್ರೇಶ್ವರ, ರಮೇಶ ಚವ್ಹಾಣ, ಕಿಶೋರ ಜಾಧವ, ಮುಜಾಹಿದ್ ಕೊತ್ವಾಲ್ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ಖರೀದಿ ವಿಷಯದಲ್ಲಿ ಮತ್ತು ಹಳೆ ವೈಷಮ್ಯದಿಂದ ಈ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.