ಕಡಂದಲೆ : ಚಂಪಾ ಷಷ್ಠಿ ಮಹೋತ್ಸವ ಪಂಕ್ತಬೇಧದ ವಿರುದ್ಧ ಸಾರ್ವಜನಿಕರ ಆಕ್ಷೇಪ

ಮೂಡುಬಿದಿರೆ : ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಚಂಪಾ ಷಷ್ಠಿ ಮಹೋತ್ಸವವು ಕೊರೋನಾ ಮುಂಜಾಗೃತ ಕ್ರಮಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆದಿತ್ತಾದರೂ ಮಧ್ಯಾಹ್ನದ ವೇಳೆ ಪಂಕ್ತಿಬೇಧವು ಭಕ್ತಾಧಿಗಳ ಆಕ್ಷೇಪಕ್ಕೆ ಕಾರಣವಾಯಿತು.
ಮಹೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷವೂ ಇಲ್ಲಿ ಪಂಕ್ತಿಬೇಧ ನಡೆಯುತ್ತಾ ಬಂದಿತ್ತು. ಆದರೆ ಕಳೆದ ವರ್ಷ ಪಂಕ್ತಿಬೇಧದ ವಿಚಾರದಲ್ಲಿ ವಿವಾದ ಉಂಟಾಗಿ ದಲಿತ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು. ಆ ಬಳಿಕ ಧರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆ ಇಲ್ಲಿ ಪಂಕ್ತಿಬೇಧಕ್ಕೆ ಇಲ್ಲಿ ಅವಕಾಶನೀಡುವುದಿಲ್ಲವೆಂದು ಭರವಸೆ ನೀಡಿದ್ದರು. ಆದರೆ ಈ ಬಾರಿ ಮತ್ತೆ ಕ್ಷೇತ್ರದ ಅರ್ಚಕರಲ್ಲದೆ ಮೇಲ್ವರ್ಗದ ಮಹಿಳೆಯರೂ ಸೇರಿ ಪ್ರಾಂಗಣದಲ್ಲಿ ಪ್ರತ್ಯೇಕ ಭೋಜನದ ವ್ಯವಸ್ಥೆ ಮಾಡುವ ಮೂಲಕ ಪಂಕ್ತಿಬೇಧ ಮುಂದುವರೆಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿದರು. ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆದರೆ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದೆಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.