ಕಠಿಣ ಹೋರಾಟಕ್ಕೆ ಸಿದ್ಧರಾಗಿ:ಸಂಸದರಿಗೆ ಮೋದಿ ಕರೆ

ನವದೆಹಲಿ,ಮಾ.೨೮-ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ತೊಡೆ ತಟ್ಟಿರುವ ಬೆನ್ನೆಲ್ಲೇ ಇದಕ್ಕೆ ಪ್ರತಿಯಾಗಿ ಕಠಿಣ ಹೋರಾಟಕ್ಕೆ ಸಿದ್ಧರಾಗುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಸಂಸತ್ತಿನ ಉಭಯ ಸದನದಲ್ಲಿ ಅದಾನಿ ಷೇರು ವಂಚನೆ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸುವಂತೆ ಪಟ್ಟು ಹಿಡಿದು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಇದರ ಬೆನ್ನೆಲ್ಲೇ ಮೋದಿಯವರು ಪ್ರತಿ ತಂತ್ರಕ್ಕೆ ಮುಂದಾಗಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಬೆಳೆದು ಯಶಸ್ಸಿನ ಹಾದಿಯಲ್ಲಿದ್ದರು ಅಷ್ಟೇ ರೀತಿಯಲ್ಲಿ ಪ್ರತಿಪಕ್ಷಗಳ ದಾಳಿಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಕಠಿಣ ಹೋರಾಟ ಅಗತ್ಯವಿದೆ ಎಂದರು.
ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಹರಿಹಾಯ್ದಿವೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ವೀರ್ ಸಾವರ್ಕರ್ ಮತ್ತು ಒಬಿಸಿ ಸಮುದಾಯವನ್ನು ಅವಮಾನಿಸಿದ್ದಾರೆಂದು ತಿರುಗೇಟು ನೀಡಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಬಜೆಟ್ ಅಧಿವೇಶನದ ಮುಂದುವರೆದ ಭಾಗವಾಗಿ ನಡೆದಿರುವ ಸಂಸತ್ ಕಲಾಪ ನಡೆಯುತ್ತಿಲ್ಲ ಪ್ರತಿಪಕ್ಷಗಳು ಅದಾನಿ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದರೆ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಪಟ್ಟಿಗೆ ಮಣಿಯುತ್ತಿಲ್ಲ.
ಇದಕ್ಕೂ ಮುನ್ನ ಇತ್ತೀಚಿಗಷ್ಟೇ ಈಶಾನ್ಯ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ೩ ಪ್ರಮುಖ ವಿಜಯಗಳನ್ನು ಗಳಿಸಿದ್ದಕ್ಕಾಗಿ ಬಿಜೆಪಿ ಸಂಸದರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.