ಕಠಿಣ ಶ್ರಮದಿಂದ ಅಭ್ಯಸಿಸಿದರೆ ಸಾಧನೆ ಸಾಧ್ಯ: ತೇಗಲತಿಪ್ಪಿ

ಕಲಬುರಗಿ:ಮೇ.26: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಭ್ಯಸಿಸಿ ಸಮಾಜ, ಜಿಲ್ಲೆ, ರಾಜ್ಯ ದೇಶಕ್ಕೆ ಕೀರ್ತಿ ತನ್ನಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಕರೆ ನೀಡಿದರು.
ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ವಲಯ ಕಲಬುರಗಿ ವತಿಯಿಂದ ಕೆ.ವಿ.ಪಿ. ದಣ್ಣೂರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ನೇತೃತ್ವ ವಹಿಸಿ ಮಾತನಾಡಿ, ಇಂದು ಇಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರು ಸನ್ಮಾನ ಇದು ಕೇವಲ ಸನ್ಮಾನ ಅಲ್ಲ ಚೈತನ್ಯ ನೀಡುವ ಕಾರ್ಯಕ್ರಮವಾಗಿದ್ದು ಇದರಿಂದ ತಮ್ಮಲ್ಲಿ ಉತ್ತಮ ಸ್ಪೂರ್ತಿ ತುಂಬಿ ಇನ್ನು ಎತ್ತರಕ್ಕೆ ಬೆಳೆಯಿರಿ ಎಂದು ಕರೆ ನೀಡಿದರು.
ಪ್ರಸ್ತುತ ಇಂಗ್ಲೀಷ ಮಾಧ್ಯಮ ಶಾಲೆಗಳು ಹೆಚ್ಚೆಚ್ಚು ಆರಂಭವಾಗಿರುವದರಿಂದ ಕನ್ನಡ ಭಾಷೆ ಅಸಡ್ಡೆ ಭಾವನೆಯಿಂದ ನೋಡುತ್ತಿರುವುದು ದುರದೃಷ್ಟಕರ, ಇದೇ ಕನ್ನಡ ಭಾಷೆಯಲ್ಲಿ ಅಭ್ಯಶಿಸಿ ಐಎಎಸ್, ಐಪಿಎಸ್ ಸೇರಿದಂತೆ ಅತ್ಯನ್ನತ ಹುದ್ದೆಯಲ್ಲಿರುವುದನ್ನು ನಾಡು ನೋಡುತ್ತೇವೆ. ಅದೇ ರೀತಿಯಾಗಿ ಕನ್ನಡ ಒಟ್ಟು 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ನಮಗೆ ಹೆಮ್ಮೆಯ ಸಂಗತಿ. ಕನ್ನಡಕ್ಕೆ 110 ವರ್ಷಗಳ ಇತಿಹಾಸವಿದ್ದು ಮಾತೃ ಭಾಷೆಯಲ್ಲಿ ಅಭ್ಯಶಿಸಿ ಸಾಕಷ್ಟು ಸಾಧನೆ ಮಾಡಿರುವುದನ್ನು ಕಾಣುತ್ತೇವೆ.
ಮಕ್ಕಳು ಗುರು, ಹಿರಿಯರಿಗೆ, ತಂದೆ-ತಾಯಿಗಳಿಗೆ ಗೌರವನ್ನು ಕೊಟ್ಟು ಶ್ರಮವಹಿಸಿ ಅಭ್ಯಶಿಸಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ತಿಳಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಪಿ. ದಣ್ಣೂರ ಕಾಲೇಜಿನ ಕಾರ್ಯದರ್ಶಿಗಳಾದ ಕಲ್ಯಾಣರಾವ ಶೀಲವಂತ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗಪಡಿಸಿಕೊಂಡು ಅಭ್ಯಶಿಸಲು ಸಲಹೆ ನೀಡಿದರು. ಕಳೆದು ಹೋದ ಮುತ್ತು ಸಿಗಬಹುದು ಆದರೆ ಸಮಯ ಎಂದು ಮರಳಿ ಬಾರದು ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಏನ್ನಾದರೂ ಸಾಧಿಸಬಹುದು ಎಂದರು.
ಗುರುವಿನಿಂದ ನಾವು ಕಲಿತ ವಿದ್ಯೆ ಜೀವನದಲ್ಲಿ ಅಳವಡಿಸಿಕೊಂಡು ಹೋಗಲು ಸಲಹೆ ನೀಡಿದರು. ಹೇಗೆ ಜ್ಯೋತಿ ಬೆಳಗಬೇಕಾದರೆ ಅದಕ್ಕೆ ಪೂರಕ ಶಕ್ತಿ ಬೇಕಾಗಬಹುದೊ ಹಾಗೆ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಗುರು-ಹಿರಿಯರ, ತಂದೆ-ತಾಯಿಗಳ ಸಹಕಾರ ಮಾರ್ಗದರ್ಶನ ಅತಿ ಅವಶ್ಯ ಎಂದರು. 25 ವರ್ಷಗಳ ಕಾಲ ನಾವು ಶ್ರಮಪಟ್ಟು ವಿದ್ಯೆ ಪಡೆದರೆ ಅದು 75 ವರ್ಷಗಳವರೆಗೆ ನಮ್ಮ ಸುಖ ಜೀವನಕ್ಕೆ ದಾರಿಯಾಗುತ್ತದೆ ಜೊತೆಗೆ ಒಳ್ಳೆಯವರ ಸಹವಾಸ ಅಷ್ಟೇ ಅತಿ ಅವಶ್ಯ ಎಂದರು.
ವಿದ್ಯೆ ಸಾಧಕರ ಸೊತ್ತು, ಅದು ತನ್ನಿಂದ ತಾನೇ ಬರುವುದುಲ್ಲ ಅದನ್ನು ಪಡೆಯಬೇಕಾದರೆ ಸಾಕಷ್ಟು ಶ್ರಮ ವಹಿಸಿದರೆ ಮಾತ್ರ ಅದು ನಮಗೆ ಒಲಿದು ಬರುವುದು. ಸಿಕ್ಕ ಪ್ರತಿ ಕ್ಷಣವೂ ವ್ಯರ್ಥ ಮಾಡದರೆ ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು. ಒಂದು ವೇಳೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ನಾವು ಕೊರಗದೆ ಮುಂದೆ ಇನ್ನಷ್ಟು ಸಾಧನೆ ಉತ್ತಮ ಫಲಿತಾಂಶ ಪಡೆಯಬಹುದು, ನಿನ್ನ ಜೀವನದ ಶಿಲ್ಪಿ ನೀನೆ ಎಂಬ ಡಾ. ಬಿ.ಆರ್. ಅಂಬೇಡ್ಕರವರ ಮಾತನ್ನು ಅವರು ನೆನಪಿಸಿದರು. ಖಡ್ಗ ಹಿಡಿದವರನ್ನು ಸೋಲಿಸಬಹುದು ಪುಸ್ತಕ ಹಿಡಿದವರನ್ನು ಎಂದೂ ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿ ಹೇಳಿದರು.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಇಚ್ಚಾಶಕ್ತಿ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು. ಯಾವುದಕ್ಕೂ ಜೀವನದಲ್ಲಿ ನೆಪ ಮಾತ್ರ ಬೇಡ, ಶ್ರಮ ವಹಿಸಿ ಸಾಧನೆ ಮಾಡಿದರು.
ಕಸಾಪ ಉತ್ತರ ವಲಯ ಅಧ್ಯಕ್ಷರಾದ ಪ್ರಭುಲಿಂಗ ಆಶಯ ನುಡಿಗಳನ್ನಾಡುತ್ತಾ, ಸಾಹಿತ್ಯ ಪರಿಷತ್ತು ಉತ್ತರ ವಲಯದಿಂದ ವಿದ್ಯಾರ್ಥಿಗಳಲ್ಲಿ ಹೊಸ ಚೈತನ್ಯ ತುಂಬಲು ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೇದಿಕೆ ಮೇಲೆ ಎಂ.ಎನ್. ದೇಸಾಯಿ ಡಿಗ್ರಿ ಕಾಲೇಜಿ ಅಧ್ಯಕ್ಷರಾದ ಸಂದೀಪ ದೇಸಾಯಿ, ಅರ್ಜುನ ಹತ್ತಿ, ಶರಣಬಸಪ್ಪಾ ನರೋಣಿ, ಗೌರವಾಧ್ಯಕ್ಷರಾದ ಶಿವಯೋಗೆಪ್ಪಾ ಬಿರಾದಾರ ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿಗಳಾದ ಹಣಮಂತರಾಯ ದಿಂಡೂರೆ, ನಾಗೇಶ ತಿಮ್ಮಾಜಿ, ಕೋಶಾಧ್ಯಕ್ಷರಾದ ಶ್ರೀಕಾಂತ ಪಾಟೀಲ ದಿಕ್ಸಂಗಾ, ಸಂಚಾಲಕರಾದ ನವಾಬ್ ಖಾನ್, ಪ್ರತಿನಿಧಿಗಳಾದ ರವೀಂದ್ರ ಬಿರಾಜದಾರ, ಕೃಷ್ಣಪ್ಪ ನಾಯಕ, ಹೇಮಂತ ಸರದಾರ, ಮಹಿಳಾ ಪ್ರತಿನಿಧಿಗಳಾದ ಶಿವಕನ್ಯಾ ಮಲ್ಲಿಕಾರ್ಜುನ, ಕವಿತಾ ದೇಗಾಂವ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಗುರುಗಳಾದ ಕೆ. ಬಸವರಾಜ ಅವರು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.