ಕಠಿಣ ಲಾಕ್ ಡೌನ್-ನಗರ ಮತ್ತೆ ಸ್ತಬ್ಧ

ಕಲಬುರಗಿ,ಮೇ.27-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎರ‌ಡನೇ ಸುತ್ತಿನ ಸಂಪೂರ್ಣ ಲಾಕ್ ಡೌನ್ ನ ಮೊದಲನೇ ದಿನವಾದ ಇಂದು ಇಡೀ ನಗರಕ್ಕೆ ನಗರವೇ ಸ್ತಬ್ಧಗೊಂಡಿದೆ.
ಕೊರೊನಾ ನಿಯಂತ್ರಣಕ್ಕೆ ಈ ಮೊದಲು ಜಿಲ್ಲಾಧಿಕಾರಿಗಳು ಮೂರುದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದರು. ಎರಡನೇ ಸುತ್ತಿನಲ್ಲಿ ನಾಲ್ಕುದಿನಗಳ ಕಾಲ (ಮೇ.27ರ ಬೆಳಿಗ್ಗೆ 6 ಗಂಟೆಯಿಂದ ಮೇ.31ರ ಬೆಳಿಗ್ಗೆ 6 ಗಂಟೆಯವರೆಗೆ) ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ್ದಾರೆ. ಈ ಮೊದಲು ಮೂರು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದಾಗಲೂ ಜನ ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಎರಡನೇ ಸುತ್ತಿನ ಸಂಪೂರ್ಣ ಲಾಕ್ ಡೌನ್ ಗೂ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದೆ.
ಎರಡನೇ ಸುತ್ತಿನ ಸಂಪೂರ್ಣ ಲಾಕ್ ಡೌನ್ ನಲ್ಲಿ ಅಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಹೋಟೆಲ್ ಗಳಲ್ಲಿ ಊಟ ಮತ್ತು ಉಪಹಾರ ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿದ್ದು, ಆಸ್ಪತ್ರೆ, ಔಷಧಿ ಅಂಗಡಿಗಳು, ಅಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಪಂಪ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆಗಳು ಕಾರ್ಯನಿರ್ವಹಿಸಲಿವೆ.
ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜನರ ಓಡಾಟ ನಿಂತಿದೆ. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿವೆ. ಈ ಮೊದಲು ವಾಹನಗಳು ಮತ್ತು ಜನರ ಓಡಾಟದಿಂದಾಗಿ ಗಿಜುಗುಡುತ್ತಿದ್ದ ನಗರದ ಕೇಂದ್ರ ಬಸ್ ನಿಲ್ದಾಣ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ರಾಷ್ಟ್ರಪತಿ ಚೌಕ್, ಜಗತ್ ವೃತ್ತ, ರೈಲ್ವೆ ನಿಲ್ದಾಣ ರಸ್ತೆ, ಸೂಪರ್ ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಇಂದು ಜನರಿಲ್ಲದೆ ಬಣಗುಡುತ್ತಲಿದ್ದವು.
ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಕಾವಲು ಕಾಯುತ್ತಿದ್ದು, ರಸ್ತೆಗಿಳಿದ ವಾಹನ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ತುರ್ತು ಮತ್ತು ಅಗತ್ಯ ಸೇವೆಗಾಗಿ ತೆರಳುತ್ತಿರುವವರನ್ನು ವಿಚಾರಣೆ ನಡೆಸಿ ಬಿಟ್ಟುಕೊಟ್ಟರೆ, ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಜಪ್ತಿ ಮಾಡುವುದರ ಜೊತೆಗೆ ದಂಡ ವಿಧಿಸಿದರು.
ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳು ಮಾತ್ರವಲ್ಲದೆ ಬಡಾವಣೆಗಳಲ್ಲಿನ ಅಂಗಡಿ, ಮುಂಗಟ್ಟುಗಳು ಸಹ ಬಾಗಿಲು ಮುಚ್ಚಿದ್ದವು. ಇದರಿಂದಾಗಿ ಜನ ಅನಗತ್ಯವಾಗಿ ಮನೆಯಿಂದ ಹೊರ ಬರಲು ಕಡಿವಾಣ ಬಿದ್ದಂತಾಗಿತ್ತು. ಇಷ್ಟಾದರೂ ಅಲ್ಲಲ್ಲಿ ಜನ ಮತ್ತು ವಾಹನಗಳ ಓಡಾಟ ನಡೆದಿದ್ದು ಕಂಡುಬಂತು.
@12bc =ಸೋಂಕಿತರ ಸಂಖ್ಯೆ ಇಳಿಮುಖ
ಸಂಪೂರ್ಣ ಲಾಕ್ ಡೌನ್ ನಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಕಳೆದ ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಹೋಗಿದೆ. ಮೇ.20 ರಂದು 339 ಸೋಕಿಗೀಡಾಗಿದ್ದರೆ, 21 ರಂದು 352, 22 ರಂದು 277, 23 ರಂದು 234, 24 ರಂದು 245, 25 ರಂದು 165 ಮತ್ತು 26 ರಂದು 175 ಸೋಂಕಿಗೀಡಾಗಿದ್ದಾರೆ. ಆದರೆ ಸೋಂಕಿನಿಂದ ಸಾವನ್ನಪ್ಪಿತ್ತಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಸಂಪೂರ್ಣ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿದ್ದು, ಇದು ಸಾಕಷ್ಟು ಯಶಸ್ವಿಯಾಗಿದೆ.
ಪೊಲೀಸ್ ಸರ್ಪಗಾವಲು
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುವ ಎರಡನೇ ಸುತ್ತಿನ ಸಂಪೂರ್ಣ ಲಾಕ್ ಡೌನ್ ಯಶಸ್ವಿಗೊಳಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.
ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲೆಡೆಯೂ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಡಾವಣೆಗಳಲ್ಲಿಯೂ ಸೈರನ್ ಹಾಕುತ್ತ ಪೊಲೀಸ್ ವಾಹನಗಳು ಓಡಾಡುತ್ತಿವೆ.
ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಅನಗತ್ಯವಾಗಿ ರಸ್ತೆಗಿಳಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ.