ಕಲಬುರಗಿ,ಮಾ.24-ಕಠಿಣ ಪರಿಶ್ರಮ ಮತ್ತು ನಿರಂತರವಾದ ಅಧ್ಯಯನದಿಂದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮವಾದ ಸಾಧನೆ ಮಾಡಲು ಸಾಧ್ಯವಿದೆ ಎಂದು ನಿವೃತ್ತ ಉಪನ್ಯಾಸಕ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ಹೇಳಿದರು.
ಆಳಂದ ತಾಲ್ಲೂಕಿನ ವ್ಹಿ.ಕೆ.ಸಲಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಮತ್ತು ಸಾವಿತ್ರಿಬಾಯಿ ಫುಲೆÉ ಪ್ರಶಸ್ತಿ ಪುರಸ್ಕøತ ಶಿಕ್ಷಕಿ ಮಹಾದೇವಿ ಬಂಧು ಅವರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಜೊತೆಗೆ ಜೀವನದಲ್ಲಿ ಶಿಸ್ತು, ಸಂಯಮ, ಸನ್ನಡತೆ, ಸೌಜನ್ಯ ಮತ್ತು ಸುಶೀಲವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು, ಸಮಯ ವ್ಯರ್ಥ ಮಾಡದೆ ಗುರುಗಳ ಮಾರ್ಗದರ್ಶನದಲ್ಲಿ ನಿರತಂತರವಾದ ಅಧ್ಯಯನ ಮಾಡಿ ಉತ್ತಮ ಸಾಧನೆ ಮಾಡುವುದರ ಮೂಲಕ ತಂದೆ-ತಾಯಿ, ಗುರುಗಳು, ಓದಿದ ಶಾಲೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಗುರುಗಳಾದ ರಾಮಪ್ಪ ಯರಕ್ಯಾಳ ಅವರು ಮಾತನಾಡಿ, ಮಕ್ಕಳು ಕಷ್ಟದ ವಿಷಯವನ್ನು ಇಷ್ಟ ಪಟ್ಟು ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಭಯ ಪಡದೇ ಜಯಶೀಲರಾಗಬೇಕೆಂದು ಶುಭ ಹಾರೈಸಿದರು. ಗಣಿತ ಶಿಕ್ಷಕಿ ಕವಿತಾ ಪಾಟೀಲ ಅವರು ಮಾತನಾಡಿ 3 ವರ್ಷದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವಿನ ಸಂಬಂಧ ತಂದೆ-ತಾಯಿ-ಮಕ್ಕಳ ಹಾಗೆ ಇತ್ತು. ಮುಂದಿನ ನಿಮ್ಮ ಭವಿಷ್ಯ ಉಜ್ವಲ ವಾಗಲೆಂದು ಶುಭ ಹಾರೈಸಿದರು. ಬಾಲಾಜಿ, ಶೋಭಾವತಿ ಮಕ್ಕಳಿಗೆ ಹಿತೋಪದೇಶ ನೀಡಿದರು.
ಇದೇ ಸಮಾರಂಭದಲ್ಲಿ ಅಪ್ಪ ಪ್ರಶಸ್ತಿ ಮತ್ತು ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ಮಹಾದೇವಿ ಕೆ.ಬಂಧು ಅವರಿಗೆ ಶಾಲೆಯ ಸಿಬ್ಬಂದಿ ಸನ್ಮಾನಿಸಿ ಗೌರವಿಸಿದರು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಶಿಕ್ಷಕರಾದ ಮಹಾದೇವಪ್ಪ, ಬಾಲಾಜಿ, ಶೋಭಾವತಿ, ದೀಪಾ, ಕವಿತಾ, ಮಹಾದೇವಿ, ಸಂಗೀತಾ, ಪ್ರಗತಿ, ನಿರ್ಮಲಾ ಮತ್ತು ವಿದ್ಯಾರ್ಥಿಗಳ ಪ್ರತಿನಿಧಿಗಳಾದ ಸ್ವಪ್ನ, ಸಹನಾ, ಐಶ್ವರ್ಯ, ರಾಧಿಕಾ, ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು. ಮೊದಲಿಗೆ ಶಿವಲೀಲಾ ಪ್ರಾರ್ಥನೆ ಗೀತೆ ಹಾಡಿದರು. ನಸೀಮ್ ವಂದನಾರ್ಪಣೆ ಮಾಡಿದರೆ, ಕಾರ್ಯಕ್ರಮವನ್ನು ಹತ್ತನೇ ತರಗತಿ ವಿದ್ಯಾರ್ಥಿನಿ ಸಾನಿಕಾ ನಡೆಸಿಕೊಟ್ಟರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.