ಕಠಿಣ-ಜಾಗೃತ ಹೆಜ್ಜೆಗಳ ಅಗತ್ಯವಿದೆ: ಸಚಿವ ಕೋಟ

ಕುಂದಾಪುರ ಮೇ ೩- ಕೋವಿಡ್ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯಲು ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಕೈಜೋಡಿಸಬೇಕಾಗಿದೆ. ಕೊರೋನ ಬಾರದಂತೆ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನಗಳಾಗಬೇಕು. ಇದಕ್ಕಾಗಿ ಕಠಿಣ ಮತ್ತು ಜಾಗೃತ ಹೆಜ್ಜೆಗಳ ಅಗತ್ಯವಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಗೆ ರವಿವಾರ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ಮಾಡಿ, ವೈದ್ಯರು ಹಾಗೂ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್ ಇನ್ನಿತರ ಸೌಲಭ್ಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ೧೮ ವರ್ಷ ಮೇಲ್ಪಟ್ಟವರು ಆನ್‌ಲೈನ್ ಮೂಲಕ ನೋಂದಾವಣೆ ಮಾಡಿದರೆ, ಎರಡು ದಿನದೊಳಗೆ ಲಸಿಕೆ ನೀಡಲಾಗುವುದು ಎಂದರು. ಆಂಬ್ಯುಲೆನ್ಸ್ ಕೊರತೆಯ ಹಿನ್ನೆಲೆಯಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ತಿಳಿಸಲಾಗಿದೆ. ವೆಂಟಿಲೇಟರ್ ಇರುವ ಆಂಬ್ಯುಲೆನ್ಸ್ ಬಗ್ಗೆ ಎರಡು ದಿನದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಕ್ವಾರಂಟೈನ್ ಅವಧಿ ಮುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗಧಿಕಾರಿ ಕೆ.ರಾಜು, ತಹಶೀಲ್ದಾರ್ ಆನಂದಪ್ಪನಾಯಕ್, ರಾಜ್ಯ ಆಹಾರ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಪುರಸಭೆ ಸದಸ್ಯ ಮೋಹನ್ ದಾಸ್ ಶೆಣೈ, ಡಾ.ನಾಗೇಶ್, ಡಾ.ರಾಬರ್ಟ್ ಮೊದಲಾದವರು ಉಪಸ್ಥಿತರಿದ್ದರು.