ಕಠಿಣ ಕ್ರಮ: ಎಚ್ಚರಿಕೆ


ಬ್ಯಾಡಗಿ,ಮೇ.22: ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಂಡು ಅವರ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ತಹಶೀಲ್ದಾರ ರವಿ ಕೊರವರ ಎಚ್ಚರಿಸಿದರು.

ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ 2024?25ನೇ ಸಾಲಿನ ಕೃಷಿಪರಿಕರ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಪರಿಕರ ಮಾರಾಟಗಾರರು ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹೆಚ್ಚುವರಿ ಗೋದಾಮು ಬೇಕಿದ್ದಲ್ಲಿ ಅದಕ್ಕೂ ಪರವಾನಗಿ ಕಡ್ಡಾಯ. ಪರವಾನಗಿ ಪಡೆಯದೆ ರಸಗೊಬ್ಬರವನ್ನು ಅನಧಿಕೃತವಾಗಿ ದಾಸ್ತಾನು ಮಾಡಿದಲ್ಲಿ ಅಂತಹ ಗೊಬ್ಬರವನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ರೈತರು ಪ್ಯಾಕಿಂಗ್ ಇಲ್ಲದೆ ಇರುವ ಹತ್ತಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೀಜಗಳನ್ನು ಖರೀದಿಸಬಾರದು. ಹಾಗೇನಾದರೂ ಹಳ್ಳಿಗಳಲ್ಲಿ ಪ್ಯಾಕಿಂಗ್ ಮತ್ತು ಲೆಬಲಿಂಗ್ ಇಲ್ಲದೆ ಲೂಸ್ ಬೀಜಗಳನ್ನು ಮಾರುವವರು ಸಿಕ್ಕಲ್ಲಿ ಅವರ ಕುರಿತು ಮಾಹಿತಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ನೀಡಬೇಕು ಎಂದು ತಿಳಿಸಿದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಇತ್ತೀಚಿಗಿನ ದಿನಗಳಲ್ಲಿ ನಕಲಿ ಬೀಜಗಳ ಮಾರಾಟ ಜಾಲ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತಾಲೂಕು ಆಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ಯಾವುದೇ ತೆರನಾದ ವಂಚಬೆಯಾಗದಂತೆ ಮುಂಜಾಗ್ರತೆ ವಹಿಸಿ ರೈತರ ಹಿತ ಕಾಯಲು ಮುಂದಾಗಬೇಕೆಂದು ತಿಳಿಸಿದರು.

ಸಭೆಯಲ್ಲಿ ಕೃಷಿ ಅಧಿಕಾರಿಗಳಾದ ನಾಗರಾಜ ಬನ್ನಿಹಟ್ಟಿ, ನಿಂಗಪ್ಪ ಕಾಕೋಳ, ಕೆ.ಬಿ.ಹಿರೇಹಾಳ, ರೈತ ಮುಖಂಡ ಶಂಕರಗೌಡ ಪಾಟೀಲ ಸೇರಿದಂತೆ ಕೃಷಿಕ ಸಮಾಜದ ಪ್ರತಿನಿಧಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.