ಕಠಿಣಾತಿಕಠಿಣ ಲಾಕ್‌ಡೌನ್

ಬೆಂಗಳೂರು,ಮೇ ೨೪- ಕೊರೊನಾ ನಿಗ್ರಹಕ್ಕೆ ಇಂದಿನಿಂದ ಮತ್ತೆ ೧೪ ದಿನಗಳ ವಿಸ್ತರಿತ ಲಾಕ್‌ಡೌನ್ ಜಾರಿಯಾಗಿದ್ದು, ಈ ಲಾಕ್‌ಡೌನ್ ಈ ಹಿಂದಿನ ಲಾಕ್‌ಡೌನ್‌ಗಿಂತ ಭಿನ್ನವಾಗಿರಲಿದ್ದು, ಇದು ಕಠಿಣಾತಿಕಠಿಣ ಲಾಕ್‌ಡೌನ್ ಆಗಲಿದೆ.
ಜನತಾ ಕರ್ಫ್ಯೂ ಮತ್ತು ಈ ಹಿಂದಿನ ಲಾಕ್‌ಡೌನ್ ಸಂದರ್ಭದಲ್ಲಿ ಜನ ಸುಖಾಸುಮ್ಮನೆ ಅಡ್ಡಾಡುತ್ತ, ಮಾರ್ಗಸೂಚಿಗಳನ್ನು ಪಾಲಿಸದೆ ಮನಸ್ಸೋ ಇಚ್ಛೆ ನಡೆದುಕೊಂಡ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಈ ಬಾರಿ ಕಠಿಣಾತಿಕಠಿಣ ಲಾಕ್‌ಡೌನ್‌ಗೆ ನಿರ್ಧರಿಸಿದ್ದು, ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿ ಲಾಕ್‌ಡೌನ್‌ನ ಅತ್ಯಂತ ಬಿಗಿಯಾಗಿ ಜಾರಿಗೊಳಿಸುವಂತೆ ಕಟ್ಟಪ್ಪಣೆ ಮಾಡಿದೆ.
ಸರ್ಕಾರ ನೀಡಿರುವ ಅದೇಶವನ್ನು ಟಫ್ ರೂಲ್ಸ್‌ಗಳ ಮೂಲಕ ಪಾಲಿಸಲು ಪೊಲೀಸರು ಸರ್ವ ಸನ್ನದ್ಧರಾಗಿದ್ದು, ರಾಜ್ಯದೆಲ್ಲೆಡೆ ಇಂದಿನಿಂದ ಖಾಕಿ ಕಣ್ಗಾವಲು ಬಿಗಿಯಾಗಲಿದೆ. ಅನಗತ್ಯವಾಗಿ ರಸ್ತೆಗಿಳಿಯುವವರಿಗೆ ಕಾನೂನಿನ ಬಿಸಿ ತಟ್ಟಲಿದೆ.
ಕಳೆದೆರೆಡು ದಿನಗಳಿಂದಲೇ ಬಿಗಿ ಲಾಕ್‌ಡೌನ್‌ಗೆ ಚಿತ್ತ ಹರಿಸಿರುವ ಖಾಕಿ ಪಡೆ, ಇಂದಿನಿಂದ ಮತ್ತಷ್ಟು ದೃಢವಾಗಿ, ಕಠಿಣವಾಗಿ ಲಾಕ್‌ಡೌನ್‌ನ್ನು ಅನುಷ್ಠಾನಗೊಳಿಸುತ್ತಿದೆ ರಾಜ್ಯಾದ್ಯಂತ ವಿನಾಕಾರಣ ಓಡಾಡುವವರ ಮೇಲೆ ಮೊಕದ್ದಮ್ಮೆ ದಾಖಲಿಸಿ ವಾಹನಗಳನ್ನು ವಶಪಡೆಯುವ ಕೆಲಸ ಚುರುಕಾಗಿ ನಡೆದಿದೆ.
ರಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಪ್ರಮುಖ ರಸ್ತೆಗಳಲ್ಲಿ, ವೃತ್ತಗಳಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಖಾಕಿ ಕಾವಲು ಜೋರಾಗಿದೆ. ಪೊಲೀಸರ ಕಣ್ತಪ್ಪಿಸಿ ಯಾರು ಸುಖಾಸುಮ್ಮನೆ ಓಡಾಡದಂತಹ ಪರಿಸ್ಥಿತಿ ಎಲ್ಲೆಡೆ ಇದೆ.
ಅಗತ್ಯ ವಸ್ತುಗಳ ಖರೀದಿ ಅವಧಿ ಮುಗಿದ ನಂತರ ಅಂದರೆ ಬೆಳಿಗ್ಗೆ ೧೦ ಗಂಟೆ ನಂತರ ಪೊಲೀಸ್ ಕಾರ್ಯಾಚರಣೆ ಆರಂಭವಾಗಿದ್ದು, ಮನೆಯಿಂದ ಬರುವ ಪ್ರತಿಯೊಬ್ಬರನ್ನೂ ತಡೆದು ನಿಲ್ಲಿಸಿ ತಪಾಸಣೆ ಕೆಲಸವನ್ನೂ ನಡೆಸಿದ್ದಾರೆ.
ಅಗತ್ಯ ಸೇವೇ ವ್ಯಾಪ್ತಿಯಲ್ಲಿ ಬರುವವರ ಓಡಾಟಕ್ಕೆ ಯಾವುದೇ ತೊಂದರೆ ಇಲ್ಲ. ಎಲ್ಲರ ಗುರುತಿನ ಚೀಟಿಯನ್ನು ಪರೀಕ್ಷಿಸಿ ಅನಗತ್ಯವಾಗಿ ರಸ್ತೆಗೆ ಬಂದವರ ವಿರುದ್ಧ ಮೊಕದ್ದಮ್ಮೆ ದಾಖಲಿಸುವ ಕೆಲಸವನ್ನೂ ಪೊಲೀಸರು ನಡೆಸಿದ್ದಾರೆ. ಪೊಲೀಸರ ಬಿಗಿ ಕ್ರಮಕ್ಕೆ ಬೆದರಿರುವ ಜನತೆ ಇಂದು ಸುಖಾ ಸುಮ್ಮನೆ ಇಳಿಯುವ ದುಸ್ಸಾಹಸ ಮಾಡಿಲ್ಲ. ಹಾಗಾಗಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿದೆ.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಈಗಾಗಲೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಧಾರವಾಡ, ರಾಯಚೂರು, ಚಿಕ್ಕಬಳ್ಳಾಪುರ, ಕೊಪ್ಪಳ ಜಿಲ್ಲೆಗಳಲಿ ನಾಲ್ಕು ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.
ಪರಿಥಿತಿಯನ್ನು ನೋಡಿಕೊಂಡು ಸಂಪೂರ್ಣ ಲಾಕ್‌ಡೌನ್ ಸೇರಿದಂತೆ ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಜಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಬೆಂಗಳೂರಿನಲ್ಲೂ ಬಿಗಿ ಲಾಕ್‌ಡೌನ್ ಕಟ್ಟುನಿಟ್ಟಿನ ತಪಾಸಣೆ:
ಬೆಂಗಳೂರಿನ ಮಲ್ಲೇಶ್ವರ, ಮತ್ತೀಕೆರೆ,ಮೆಜೆಸ್ಟಿಕ್, ಕೆ.ಆರ್.ವೃತ್ತ, ಕಾರ್ಪೋರೇಷನ್ ವೃತ್ತ, ಸ್ಯಾಟ್‌ಲೈಟ್ ಬಸ್ ನಿಲ್ದಾಣ, ನಾಯಂಡನಹಳ್ಳಿ, ಮಾಗಡಿ ರಸ್ತೆ, ಓಕಳಿಪುರ, ಯಶವಂತಪುರ, ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ತೆರೆದು ಪ್ರತಿಯೊಂದು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಕಡಿಮೆ ಜನಸಂದಣಿ:
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಯಶವಂತಪುರ, ರಾಜಾಜಿನಗರ, ವಿಜಯನಗರ, ಚಾಮರಾಜಪೇಟೆ, ಶಿವಾಜಿನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ನಿನ್ನೆಯ ಖರೀದಿಗೆ ಹೋಲಿಸಿದರೆ ಇಂದು ಜನಸಂದಣಿಯು ಸ್ವಲ್ಪ ಕಡಿಮೆಯಿತ್ತು.
ಬೆಳಿಗ್ಗೆ ೬ರಿಂದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಇದೇ ಸಮಯದಲ್ಲಿ ಮಾರುಕಟ್ಟೆಗೆ ಬಂದಿದ್ದ ಜನ, ವಸ್ತುಗಳನ್ನು ಖರೀದಿಸಿಕೊಂಡು ಹೋದರು. ಬೆಳಿಗ್ಗೆ ೯.೪೫ಕ್ಕೆ ಬಹುತೇಕ ಕಡೆ ಅಂಗಡಿಗಳನ್ನು ಬಂದ್ ಮಾಡಲಾಯಿತು.
ವಾಹನಗಳ ವಶ:
ಮೇ ೨೨ ಬೆಳಿಗ್ಗೆಯಿಂದ ನಿನ್ನೆ ರಾತ್ರಿ ೮ ಗಂಟೆಯವರೆಗೆ ೩,೮೨೧ ವಾಹನಗಳನ್ನು ಜಪ್ತಿಮಾಡಲಾಗಿದ್ದು, ಇಂದು ಕೂಡ ನಗರದಲ್ಲಿ ಬೇಕಾಬಿಟ್ಟಿ ಸಂಚರಿಸಿದ ಸಾವಿರಾರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ನಗರದಲ್ಲಿ ಲಾಕ್‌ಡೌನ್ ಕಠಿಣವಾಗಿ ಮಾಡಲಾಗಿದ್ದು,ಪೊಲೀಸರ ಕಠಿಣ ಕ್ರಮಕ್ಕೆ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಇಷ್ಟು ದಿನ ಲಾಕ್‌ಡೌನ್ ಬಗ್ಗೆ ತಾತ್ಸಾರ ಹೊಂದಿದ್ದ ಬಹುತೇಕ ಮಂದಿ ಪೊಲೀಸರ ಕ್ರಮಗಳಿಗೆ ಹೆದರಿ ಮನೆ ಸೇರಿದ್ದಾರೆ.
ಕಠಿಣ ಪರಿಶೀಲನೆ:
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಂಡೋಪತಂಡಗಳಲ್ಲಿ ನಿಂತಿದ್ದರು. ಬೆಳಗ್ಗೆ ೯.೪೫ರ ಸಮಯ ಕಳೆಯುತ್ತಿದ್ದಂತೆ ರಸ್ತೆಗೆ ಇಳಿದ ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ.

ಇಂದಿನಿಂದ ೨ನೇ ಹಂತದ ಲಾಕ್‌ಡೌನ್ ಜಾರಿಯಾಗಿದ್ದು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವವರನ್ನು ಸುಮ್ಮನೆ ಬಿಡಲ್ಲ ಎಂದು ಗುಡುಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಂದಿನಿಂದ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಅನಗತ್ಯವಾಗಿ ಓಡಾಡುವ ವಾಹನಗಳ ಸೀಜ್ ಮುಂದುವರೆಸಲಾಗುತ್ತೆ. ಗ್ರಾಮೀಣ ಪ್ರದೇಶದಲ್ಲೂ ಲಾಕ್‌ಡೌನ್ ಪರಿಣಾಮಕಾರಿಯಾಗಿರುತ್ತದೆ ಎಂದ ಅವರು, ಪಟ್ಟಣ ಪ್ರದೇಶಗಳಲ್ಲೆ ಉಲ್ಲಂಘನೆ ಪ್ರಕರಣ ಜಾಸ್ತಿಯಾಗುತ್ತಿದೆ. ಹೀಗಾಗಿ, ಬಿಗಿಯಾದ ಕ್ರಮ ಅನಿವಾರ್ಯ ಎಂದವರು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಈ ಲಾಕ್‌ಡೌನ್‌ನಲ್ಲಿ ಇನ್ನು ಮುಂದೆ ಬಿಗಿ ಮತ್ತು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ೩-೪ ದಿವಸ ಸಂಪೂರ್ಣ ಲಾಕ್‌ಡೌನ್ ಯಶಸ್ವಿಯಾಗಿದೆ. ಮಾರುಕಟ್ಟೆ ಇರುವ ಕಡೆ ಸ್ವಲ್ಪ ಜನರ ನಿಯಂತ್ರಣ ಕಷ್ಟವಾಗಿದೆ ಎಂದ ಅವರು, ೫೦ ವರ್ಷ ದಾಟಿದ ಪೊಲೀಸರಿಗೆ ಪಾಳಿಯ ಮೇಲೆ ಕೆಲಸಕ್ಕೆ ಅವಕಾಶ ಮಾಡಿಕೊಟ್ಟು ಅವರ ಸುರಕ್ಷತೆಗೂ ಒತ್ತು ನೀಡಿದ್ದೇವೆ ಎಂದರು.
ಬೆಂಗಳೂರು ನಗರದಲ್ಲಿ ಬಿಗಿ ಲಾಕ್‌ಡೌನ್‌ಗೆ ಬಿಬಿಎಂಪಿ ಅವರು ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ವ್ಯಾಕ್ಸಿನ್ ಅಕ್ರಮಕ್ಕೆ ಕಡಿವಾಣ
ಕೊರೊನಾ ಲಸಿಕೆಯ ಅಕ್ರಮ ದಂಧೆಗೆ ಕಡಿವಾಣ ಹಾಕಲಾಗುವುದು. ವ್ಯಾಕ್ಸಿನ್‌ನ್ನು ಅಕ್ರಮವಾಗಿ ಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಂತಹವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ ಎಂದರು.
ರೆಮ್‌ಡಿಸಿವಿರ್ ಔಷಧಿ ಕಳ್ಳ ದಂಧೆಗೂ ಬಿಗಿ ಕ್ರಮಕೈಗೊಂಡ ಮೇಲೆ ಎಲ್ಲ ಸರಿ ಹೋಗಿದೆ ಎಂದ ಅವರು, ಲಸಿಕೆ ಅಕ್ರಮ ದಂಧೆಗೂ ಬಿಡಲ್ಲ ಎಂದರು.
ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆ ನೀಗಿಸಲು ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಖಾಸಗಿ ಅವರಿಗೆ ಲಸಿಕೆ ನೀಡಲು ಒಂದು ದರ ನಿಗದಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಿದೆ ಎಂದು ಅವರು ಹೇಳಿದರು.