ಕಠಳ್ಳಿಯಲ್ಲಿ ವಿದ್ಯುತ್ ಪರಿವರ್ತಕ ಬದಲಾವಣೆಗೆ ರೈತರ ಆಗ್ರಹ

ಹುಮನಾಬಾದ್ :ಡಿ.11: ತಾಲೂಕಿನ ಕಠಳ್ಳಿ ಗ್ರಾಮದ ಪೀರ್ ಬಾವಿ ಹತ್ತಿರ ವ್ಯಾಪ್ತಿಯಲ್ಲಿನ ಹೊಲಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಆಗದ ಕಾರಣ ಕೃಷಿ ಚಟುವಟಿಕೆ ಮಾಡುವಿದಕ್ಕಾಗಿ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೀರ್ ಬಾವಿ ವ್ಯಾಪ್ತಿಯಲ್ಲಿ ಹೊಲಗಳ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ಮೊಟಾರುಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ನೀರಿನ ಸಮಸ್ಯೆಯಿಂದ ಬಹುತೇಕ ರೈತರ ಹೊಲಗಳಲ್ಲಿ ಉತ್ತಮವಾಗಿ ಬೆಳೆದ ಹಳದಿ ಬಣ್ಣಕ್ಕೆ ತಿರುಗಿ ರೈತರು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ.

ಪೀರ್ ಬಾವಿ ವ್ಯಾಪ್ತಿಯಲ್ಲಿನ ಹೊಲಗಳಿಗೆ ಸಂಪರ್ಕ ಕಲ್ಪಿಸುವ 63 ಕೆವಿ ವಿದ್ಯುತ್ ಪರಿವರ್ತಕ ಬದಲಾಯಿಸಿ 100 ಕೆವಿ ವಿದ್ಯುತ್ ಪರಿವರ್ತಕ ಅಳವಡಿಕೆ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಇಲ್ಲಿಯ ವರೆಗೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೃಷಿ ಚಟುವಟಿಕೆ ಮಾಡಲು ಕಂಡು ಕಂಡಲೆಲ್ಲ ಸಾಲ ಸೂಲ ಮಾಡಿ ಸಾಕಷ್ಟು ಹಣ ವೆಚ್ಚ ಮಾಡಲಾಗಿದೆ. ಉತ್ತಮವಾಗಿ ಬೆಳೆದ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಅನೇಕ ರೈತರು ಸಾಕಷ್ಟು ಆರ್ಥಿಕ ಸಂಕಷ್ಟಕ್ಕೆ ದುಡಿದಂತಾಗುತ್ತದೆ. ರೈತರ ಹಿತದೃಷ್ಟಿಯಿಂದ ಜೆಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಶೀಘ್ರಗತಿಯಲ್ಲಿ 100 ಕೆವಿ ವಿದ್ಯುತ್ ಪರಿವರ್ತಕ ಅಳವಡಿಕೆ ಮಾಡಬೇಕು ಎಂದು ರೈತರಾದ ವೀರಭದ್ರಪ್ಪ ಪಾಟೀಲ್, ಚಂದ್ರಕಾಂತ ಜಮಾದಾರ, ಕಲ್ಲಪ್ಪ ಲಾಲಪ್ಪ, ಸಿದ್ದಪ್ಪ ಪೂಜಾರಿ, ಗೋಪಾಲ ಭೋಜಪ್ಪ, ವೆಂಕಟರಡ್ಡಿ, ನಾರಾಯಣರಡ್ಡಿ, ಮಾರುತಿ ತುಕಾರಾಮ, ಹಣಮಂತರಡ್ಡಿ, ಅಶೋಕ ಪೂಜಾರಿ, ಸಂಗಪ್ಪ ನರಸಪ್ಪ, ವೈಜಿನಾಥ ರಾಚಪ್ಪ, ಗೋಪಾಲ ಒತ್ತಾಯಿಸಿದ್ದಾರೆ.


ಕಠಳ್ಳಿ ಗ್ರಾಮದ ಪೀರ್ ಬಾವಿ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಬಡಲಾಯಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸ್ವತಃ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರೆ ಸೂಚನೆ ನೀಡಿದ್ದಾರೆ. ಆದರೆ ಶಾಸಕರ ಮಾತುಗಳನ್ನು ಮೀರಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪರಿವರ್ತಕ ಬದಲಾವಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ವೀರಭದ್ರಪ್ಪ ಪಾಟೀಲ್

ಪ್ರಗತಿಪರ ರೈತ, ಕಠಳ್ಳಿ