
ಕಲಬುರಗಿ :ಮಾ.01: ಯುವಕರಿಬ್ಬರ ನಡುವಿನ ಜಗಳದಲ್ಲಿ ಓರ್ವ ಕೊಲೆಯಾದ ಘಟನೆ ಜಿಲ್ಲೆಯ ಕಾಳಮಂದರ್ಗಿ ಗ್ರಾಮದಲ್ಲಿ ಸಂಭವಿಸಿದೆ. ಮೃತನಿಗೆ ಭರತ್ ವಾಡಿ (24) ಎಂದು ಗುರುತಿಸಲಾಗಿದೆ. ಕಾಳಮಂದರ್ಗಿ ಗ್ರಾಮದ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಮಂಗಳವಾರ ಘಟನೆ ಸಂಭವಿಸಿದೆ. ಅದೇ ಗ್ರಾಮದ ಹಾಗೂ ಮೃತನ ಸಂಬಂಧಿ ಮಲ್ಲಿಕಾರ್ಜುನ್ ವಾಡಿ ಎಂಬುವವನು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭರತ್ ಎಂಬಾತ ಮಲ್ಲಿಕಾರ್ಜುನನ ಸಿಮ್ ತೆಗೆದು ಕಲ್ಲಿಗೆ ಉಜ್ಜಿ ನಿಷ್ಕ್ರೀಯಗೊಳಿಸಿದ್ದರಿಂದ ಇಬ್ಬರ ನಡುವಿನ ಜಗಳಕ್ಕೆ ಕಾರಣ ಎನ್ನಲಾಗಿದೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು.
ಭರತ್ ರಾತ್ರಿ ಊಟ ಮುಗಿಸಿ ಶಾಲೆಯ ಕಟ್ಟೆಗೆ ಬಂದು ಮಲಗಿದ್ದಾನೆ. ಹೀಗೆ ಮಲಗಿದಾತ ಬೆಳಿಗ್ಗೆ ಹತ್ಯೆಯಾಗಿದ್ದಾನೆ. ತಲೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಪಕ್ಕದಲ್ಲಿಯೇ ಸೈಜುಗಲ್ಲು ಪತ್ತೆಯಾಗಿದೆ. ಭರತನ ತಾಯಿ ಬಂಗಾರಮ್ಮ ಕಮಲಾಪೂರ್ ಈ ಕುರಿತು ದೂರು ಸಲ್ಲಿಸಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗೆ ಬಲೆ ಬೀಸಿದ್ದಾರೆ.