ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ

ಬೆಂಗಳೂರು, ಮೇ ೨೨- ಮಹಾಮಾರಿ ಕೊರೊನಾಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಮತ್ತೆ ಜೂ. ೭ರವರೆಗೂ ಲಾಕ್‌ಡೌನ್ ವಿಸ್ತರಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೆ ಲಾಕ್‌ಡೌನ್‌ನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸಲು ರಾಜ್ಯಾದ್ಯಂತ ಇಂದಿನಿಂದಲೇ ಪೊಲೀಸರು ಬಿಗಿ ಲಾಕ್‌ಡೌನ್‌ಗೆ ಕಟ್ಟುನಿಟ್ಟಿನ ಬಿಗಿಕ್ರಮ ಕೈಗೊಂಡಿದ್ದಾರೆ.
ಲಾಕ್‌ಡೌನ್ ಅನ್ನು ಬಿಗಿಯಾಗಿ ಜಾರಿಗೊಳಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿರುವ ಬೆನ್ನಲ್ಲೇ ರಾಜ್ಯಾದ್ಯಂತ ಪೊಲೀಸರು ಲಾಕ್‌ಡೌನ್ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅನಗತ್ಯವಾಗಿ ರಸ್ತೆಗಿಳಿಯುವವರಿಗೆ ಬಿಸಿಮುಟ್ಟಿಸಿದ್ದಾರೆ. ಸುಖಾಸುಮ್ಮನೆ ಓಡಾಡುವವರ ವಾಹನಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಪೊಲೀಸರು ಬಲ ಪ್ರಯೋಗಕ್ಕೆ ಮುಂದಾಗದೆ ಕಾನೂನನ್ನು ಬಳಸಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವತ್ತ ಚಿತ್ತಹರಿಸಿ, ಇಲ್ಲಸಲ್ಲದ ನೆಪಹೇಳಿ ರಸ್ತೆಗಿಳಿಯುವವರಿಗೆ ನಯವಾಗಿಯೇ ಬಿಸಿಮುಟ್ಟಿಸಿ ಸುಮ್ಮನೆ ರಸ್ತೆಗೆ ಬರಬೇಡಿ, ಕಾನೂನು ಕ್ರಮ ಕಾದಿದೆ ಎಂಬ ಖಡಕ್ ಎಚ್ಚರಿಕೆಯನ್ನೂ ನೀಡಿದ್ದು, ಪೊಲೀಸರ ಕ್ರಮಕ್ಕೆ ಸ್ವಲ್ಪಮಟ್ಟಿಗೆ ಹೆದರಿರುವ ನಾಗರಿಕರು ಇಂದು ರಾಜ್ಯಾದ್ಯಂತ ಅನಗತ್ಯ ಓಡಾಟವನ್ನು ಕಡಿಮೆ ಮಾಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬೆಳಿಗ್ಗೆ ೧೦ರ ನಂತರ ರಾಜ್ಯದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂದಿದೆ.
ಈ ನಡುವೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಸಂಚರಿಸುವ ವಾಹನಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡತೊಡಗಿದ್ದು, ವಶಪಡಿಸಿಕೊಂಡ ವಾಹನಗಳ ಸಂಖ್ಯೆ ಇಂದು ಹೆಚ್ಚಾಗಿದೆ. ಬೇರೆ ದಿನಗಳಿಗೆ ಹೋಲಿಸಿದರೆ ಇಂದು ವಶಪಡಿಸಿಕೊಂಡಿರುವ ವಾಹನಗಳ ಸಂಖ್ಯೆ ಹೆಚ್ಚಿದೆ.
ಲಾಕ್‌ಡೌನ್‌ನಲ್ಲಿ ಈ ಹಿಂದೆಯೇ ಹೊರಡಿಸಿರುವ ಮಾರ್ಗಸೂಚಿಗಳ ಅನುಷ್ಠಾನ ಮುಂದುವರೆದಿದ್ದು, ಬೆಳಿಗ್ಗೆ ೬ ರಿಂದ ೯.೪೫ ಗಂಟೆಯವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶವಿದ್ದು ನಂತರ, ರಸ್ತೆಗಿಳಿದ ವಾಹನಗಳನ್ನು ಜಪ್ತಿ ಮಾಡಲಾಗುತ್ತಿz. ಅಲ್ಲದೆ, ಅನಗತ್ಯವಾಗಿ ಇಲ್ಲಸಲ್ಲದ ಸಬೂಬು ಹೇಳಿ ಓಡಾಡುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿದೆ.
ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವ ಕೊರೊನಾ ನಿಯಮಗಳನ್ನು ಲಾಕ್‌ಡೌನ್ ಸಡಿಲವಿರುವ ಬೆಳಗಿನ ವೇಳೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ.
ಮುಂದಿನ ೧೬ ದಿನಗಳ ಕಾಲ ಅನ್ವಯವಾಗುವಂತೆ , ತುರ್ತು ಸೇವೆಗೆ ಅನುಮತಿ ನೀಡಲಾಗಿದೆ. ತುರ್ತು ಸೇವೆಗೆ ಯಾವುದೇ ಸಮಯದ ಮಿತಿ ನಿಗದಿಪಡಿಸಿಲ್ಲ. ಆದರೆ ಅಗತ್ಯ ಸೇವೆಗೆ ಮಾತ್ರ ಸಮಯ ನಿಗದಿಪಡಿಸಿ ಎಚ್ಚರಿಕೆ ವಹಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ೯.೪೫ರವರೆಗೂ ಹಾಲು, ತರಕಾರಿ, ದಿನಸಿ ಖರೀದಿ ಮಾಡಬಹುದಾಗಿದೆ. ಮೀನು, ಮಾಂಸದ ಅಂಗಡಿಗಳಿಗೂ ಇದೇ ನಿಯಮ ಅನ್ವಯಿಸುತ್ತದೆ. ಇವುಗಳನ್ನು ಹೊರತುಪಡಿಸಿದರೆ ಇತರ ಯಾವ ವಾಣಿಜ್ಯ ಮಳಿಗೆಗಳನ್ನು ತೆರೆಯಲು ನಿರ್ಬಂಧವಿರಲಿದೆ.
ಲಾಕ್‌ಡೌನ್ ಸಮಯದಲ್ಲಿ ಊಟ, ತಿಂಡಿ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣಕ್ಕೆ ಹೋಟೆಲ್‌ಗಳಲ್ಲಿ ಪಾರ್ಸೆಲ್ ಸೇವೆಗೆ ಅನುಮತಿಸಲಾಗಿದೆ. ಅದೇ ರೀತಿ ಆನ್‌ಲೈನ್ ಮೂಲಕ ಆಹಾರ ಸರಬರಾಜು ಮಾಡುವ ಫುಡ್ ಡೆಲಿವರಿ ಅಗ್ರಿಗೇಟರ್ಸ್‌ಗೆ ಅನುಮತಿಸಲಾಗಿದೆ. ಹೋಟೆಲ್‌ಗಳಿಗೆ ಹೋಗಲು ಸಾಧ್ಯವಾಗದವರು ಆನ್‌ಲೈನ್ ಮೂಲಕ ತರಿಸಿಕೊಳ್ಳಬಹುದಾಗಿದೆ.
ಸಾರ್ವಜನಿಕ ಸಾರಿಗೆ ಬಂದ್:
ಈಗಾಗಲೇ ಜಾರಿಯಲ್ಲಿರುವಂತೆ ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ಆಗಿದೆ. ರಾಜ್ಯ ಸಾರಿಗೆ ಸಂಸ್ಥೆ ಬಸ್, ಖಾಸಗಿ ಬಸ್‌ಗಳು, ಮೆಟ್ರೋ ಸೇವೆ ಸ್ಥಗಿತವಾಗಲಿದೆ. ವಿಮಾನ ಮತ್ತು ರೈಲು ಸೇವೆ ಮಾತ್ರ ಲಭ್ಯವಿದ್ದು, ಪ್ರಯಾಣಕ್ಕೆ ಕಾಯ್ದಿರಿಸಿದ ಟಿಕೆಟ್ ತೋರಿಸಿ ಟ್ಯಾಕ್ಸಿ ಮತ್ತು ಆಟೋ ಸೇವೆ ಬಳಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
ಬೆಳಿಗ್ಗೆ ಖರೀದಿ:
ಲಾಕ್‌ಡೌನ್ ಜಾರಿಯ ವೇಳೆ ಬೆಳಿಗ್ಗೆ ೬ ರಿಂದ ೯.೪೫ ರವರೆಗೆ ಖರೀದಿಗೆ ಅವಕಾಶ ಮುಂದುವರೆದಿದ್ದು ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುತ್ತಿರುವುದು ಕಂಡುಬಂದಿದೆ, ಅಲ್ಲೂ ಪೊಲೀಸರು ನಿಗಾ ವಹಿಸಿದ್ದರು.
ರಾಜ್ಯದ ಎಲ್ಲಾ ಗಾರ್ಮೆಂಟ್ಸ್‌ಗಳಿಗೂ ನಿರ್ಬಂಧ ವಿಧಿಸಿದ್ದು, ಕೇವಲ ನಿರ್ಮಾಣ ಚಟುವಟಿಕೆ ಹಾಗೂ ಕೈಗಾರಿಕಾ ವಲಯಕ್ಕೆ ಅವಕಾಶ ಸಿಗಲಿದೆ. ಅನುಮತಿಸಿದ ಸೇವಾ ವಲಯದ ವ್ಯಾಪ್ತಿಗೆ ಬರುವ ಕಟ್ಟಡ ಕಾರ್ಮಿಕರು ಮತ್ತು ಕೈಗಾರಿಕೆಗಳ ಸಿಬ್ಬಂದಿ ಓಡಾಟಕ್ಕೆ ಅವಕಾಶವಿದೆ. ಸಂಸ್ಥೆಯ ಗುರುತಿನ ಚೀಟಿ ಬಳಸಿ ಸಂಚರಿಸಬಹುದಾಗಿದೆ.
ನಗರದಲ್ಲಿ ಬಿಗಿಕ್ರಮ:
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ನಗರದಲ್ಲಿ ಹಿಂದಿಗಿಂತಲೂ ಕಠಿಣವಾದ ನಿಯಮಗಳು ಜಾರಿಗೆ ತರಲಾಗಿದೆ. ನಗರದ ಎಲ್ಲಾ ಮೇಲುಸೇತುವೆಗಳನ್ನು ಬಂದ್ ಮಾಡಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಕಟ್ಟುನಿಟ್ಟಾಗಿ ವಾಹನ ತಪಾಸಣೆ ಕೈಗೊಂಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಪೊಲೀಸ್ ಇಲಾಖೆ ಜೊತೆ ಗೃಹ ರಕ್ಷಕ ದಳದ ಸಿಬ್ಬಂದಿ, ಮೀಸಲು ಪೊಲೀಸ್ ಪಡೆಯನ್ನೂ ನಗರದಾದ್ಯಂತ ನಿಯೋಜನೆ ಮಾಡಿ ಭದ್ರತಾ ವ್ಯವಸ್ಥೆ ಬಲಪಡಿಸಲಾಗಿದೆ.
ರಾಜ್ಯದೆಲ್ಲೆಡೆ ಬಿಗಿಕ್ರಮ:
ಇನ್ನು ಎಲ್ಲಾ ಜಿಲ್ಲೆಗಳಿಗೂ ಡಿಜಿ ಪ್ರವೀಣ್ ಸೂದ್ ಮೂಲಕ ಸೂಚನೆ ನೀಡಿದ್ದು, ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಸೂಕ್ತ ವ್ಯವಸ್ಥೆ ಮಾಡಬೇಕು, ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿ, ಅಗತ್ಯ ಸೇವೆ, ತುರ್ತು ಸೇವೆಗೆ ಮಾತ್ರ ಅವಕಾಶ ಕಲ್ಪಿಸಬೇಕು, ಅನುಮತಿಸಿದ ಸೇವೆಗೆ ಅವಕಾಶ ಕಲ್ಪಿಸಿ ಲಾಕ್‌ಡೌನ್ ಜಾರಿಗೊಳಿಸುವಂತೆ ಸೂಚಿಸಲಾಗಿದೆ.
ತುರ್ತು ಸೇವೆ, ಅಗತ್ಯ ವಸ್ತು ಖರೀದಿಗೆ ಹೊರತುಪಡಿಸಿ ಇತರ ಕಾರಣಕ್ಕೆ ಯಾರೂ ಮನೆಯಿಂದ ಹೊರಬರುವಂತಿಲ್ಲ. ಅಕ್ಷರಶಃ ಜನ ಗೃಹವಾಸ ಅನುಭವಿಸಬೇಕಿದೆ.
ಕೃಷಿ ಚಟುವಟಿಕೆ ಮುಕ್ತ:
ರಾಜ್ಯಾದ್ಯಂತ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ, ಕೃಷಿಗೆ ಸಂಬಂಧಿತ ಎಲ್ಲಾ ಚಟುವಟಿಕೆಗೂ ಅವಕಾಶ ಕಲ್ಪಿಸಲಾಗಿದೆ. ಕೃಷಿ ಕ್ಷೇತ್ರದ ಕೆಲಸ ಕಾರ್ಯಗಳು,ಕೃಷಿ ಉತ್ಪನ್ನಗಳ ಸಾಗಾಣಿಕೆ, ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಅಲ್ಲಿಯೂ ಪೊಲೀಸರು ನಿಗಾ ವಹಿಸಿದ್ದಾರೆ.

ಸಾವಿರಾರು ವಾಹನಗಳು ಜಪ್ತಿ
ಕೊರೊನಾ ಲಾಕ್ ಡೌನ್ ಕಠಿಣ ಜಾರಿಯ ಸಂಪೂರ್ಣ ಅಧಿಕಾರ ಪಡೆದಿರುವ ಪೊಲೀಸರು ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ.
ರಾಜ್ಯಾದ್ಯಂತ ಕಾರ್ಯಾಚರಣೆ ಕೈಗೊಂಡಿರುವ ಪೊಲೀಸರು ಬೇಕಾಬಿಟ್ಟಿ ಸಂಚರಿಸಿದ ಸಾವಿರಾರು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬೆಳಗ್ಗೆ ೯.೪೫ರಿಂದ ಕಠಿಣ ಲಾಕ್ ಡೌನ್ ಜಾರಿಗೊಳಿಸಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಕಟ್ಟುನಿಟ್ಟಾಗಿ ವಾಹನ ತಪಾಸಣೆ ಕೈಗೊಂಡಿದ್ದಾರೆ ಅಲ್ಲದೇ ಸಣ್ಣಪುಟ್ಟ ರಸ್ತೆಗಿಳಲ್ಲೂ ಕೂಡ ಬೇಕಾಬಿಟ್ಟಿ ಸಂಚರಿಸುವ ವಾಹನಗಳು ಜಪ್ತಿ ಮಾಡಿ ಅನಗತ್ಯ ಓಡಾಡುವರರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ನಗರದಲ್ಲಿ ಸಂಜೆಯವರೆಗೆ ಅನಗತ್ಯ ಸಂಚರಿಸಿದ ದ್ವಿಚಕ್ರ ವಾಹನ, ಕಾರು, ಆಟೋ ಸೇರಿದಂತೆ ಒಟ್ಟು ೧,೪೦೪ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ವಾಹನಗಳಲ್ಲಿ ೧,೨೭೫ ದ್ವಿಚಕ್ರ ವಾಹನಗಳು, ೬೨ ಆಟೋಗಳು ಮತ್ತು ೬೭ ಕಾರುಗಳು ಸೇರಿವೆ.

ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಆದೇಶದ ಮೇರೆಗೆ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಯಾಗಿದೆ. ವಿಸ್ತರಣೆಯಾಗಿರುವ ಲಾಕ್‌ಡೌನ್ ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಟ್ಟುನಿಟ್ಟಿನ ಕಾರ್ಯಾಚರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.
ಕೆಲ ಜಿಲ್ಲೆಗಳಲ್ಲಿ ೩-೪ ದಿನಗಳ ಕಾಲ ನಿರಂತರವಾಗಿ ಲಾಕ್‌ಡೌನ್ ಮಾಡಲಾಗುತ್ತಿದೆ. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಮತ್ತು ಸೋಂಕಿನ ಸರಪಣಿಯನ್ನು ಕಡಿತಗೊಳಿಸಲು ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.