ಕಟ್ಟಹಳ್ಳಿ ಏತನೀರಾವರಿ ಯೋಜನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕೆ ಕನಸಿನ ಕೂಸು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.10: ತಾಲೂಕಿನ ಬೂಕನಕೆರೆ ಹೋಬಳಿಯ 50 ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸುವ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದು ಹೆಚ್.ಡಿ.ಕೆ ಮುಖ್ಯಮಂತ್ರಿಯಾಗಿದ್ದಾಗಲೇ ಈ ಯೋಜನೆಗೆ ಅಗತ್ಯ ಹಣಕಾಸು ಮಂಜೂರು ಮಾಡಿದ್ದರು ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶಾಸಕ ಹೆಚ್.ಟಿ.ಮಂಜು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ 2800 ಕೋಟಿ ರೂಗಳ ಯೋಜನೆ ಸಿದ್ದಪಡಿಸಿ ಅನುದಾನ ನೀಡಿದ್ದರು. ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡಿವಿ ಅನಂತರ ಅಧಿಕಾರಕ್ಕೆ ಬಂದ ಸರ್ಕಾರ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಮೀಸಲಿಟ್ಟಿದ್ದ ಎಲ್ಲಾ 2800 ಕೋಟಿ ರೂ ಅನುದಾನವನ್ನು ಹಿಂಪಡೆಯಿತು. ಜಲಧಾರೆ ಯೋಜನೆಯಡಿ ಕಟ್ಟಹಳ್ಳಿ ಏತ ನೀರಾವರಿ ಯೋಜನೆಯನ್ನು ಹೆಚ್.ಡಿ.ಕುಮಾರಸ್ವಾಮಿ ಮಂಜೂರು ಮಾಡಿದ್ದರು. ಅನಂತರ ಬಂದ ಸರ್ಕಾರ ಕಟ್ಟಹಳ್ಳಿ ಹೆಸರಿನ ಬದಲು ಐಚನಹಳ್ಳಿ ಏತ ನೀರಾವರಿ ಯೋಜನೆ ಎಂದು ಹೆಸರು ಬದಲಿಸಿ ಅನುಷ್ಟಾನಗೊಳಿಸಿತು. 265 ಕೋಟಿ ರೂ ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿದಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಶೀಳನೆರೆ ಹೋಬಳಿಯ ಉಳಿದ 43 ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕಾಗಿದೆ. ಎರಡನೇ ಹಂತದ ಕಾಮಗಾರಿಗೆ 100 ಕೋಟಿ ಅನುದಾನದ ಅಗತ್ಯವಿದ್ದು ಅದನ್ನು ಕಾರ್ಯಗತಗೊಳಿಸಲು ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಿದ್ದೇನೆ ಎಂದ ಮಂಜು
ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಅಭಿವೃದ್ದಿಗೆ 1800 ಕೋಟಿ ಅನುದಾನ ನೀಡಿದ್ದರು. ಕಟ್ಟಹಳ್ಳಿ ಏತ ನೀರಾವರಿ ಯೋಜನೆಯಲ್ಲದೆ ಸಂತೇಬಾಚಹಳ್ಳಿ ಹೋಬಳಿ ಮತ್ತು ನೆರೆಯ ನಾಗಮಂಗಲ ತಾಲೂಕಿನ ಕೆರೆಗಳನ್ನು ಹೇಮಾವತಿ ನೀರಿನಿಂದ ತುಂಬಿಸುವ ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಗೂ 222 ಕೋಟಿ ಅನುದಾನ ನೀಡಿದ್ದರು. ಅಂದು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರೇ ಹತ್ತಾರು ವೇದಿಕೆಗಳಲ್ಲಿ ಕುಮಾರಣ್ಣ ಕ್ಷೇತ್ರದ ಅಭಿವೃದ್ದಿಗೆ 1800 ಕೋಟಿ ರೂ ಅನುದಾನ ನೀಡಿರುವುದಾಗಿ ಬಹಿರಂಗವಾಗಿಯೇ ತಿಳಿಸಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಪ್ರತಿಯೊಂದು ಪ್ರಮುಖ ಅಭಿವೃದ್ದಿ ಕಾರ್ಯಗಳಲ್ಲಿ ಜೆಡಿಎಸ್ ನಾಯಕರ ಪರಿಶ್ರಮವಿದೆ ಎಂದಿರುವ ಶಾಸಕ ಹೆಚ್.ಟಿ.ಮಂಜು ಒಂದು ಸರ್ಕಾರದಲ್ಲಿ ಮಂಜೂರಾತಿಯಾದ ಅಭಿವೃದ್ದಿ ಕಾರ್ಯಕ್ರಮಗಳು ಮತ್ತೊಂದು ಸರ್ಕಾರದ ಅವಧಿಯಲ್ಲಿ ಲೋಕಾರ್ಪಣೆಗೊಳ್ಳುವುದು ಸಹಜ ಎಂದಿದ್ದಾರೆ.
ಕಟ್ಟಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಗಿದಿದ್ದರೂ ಅಗತ್ಯ ವಿದ್ಯುತ್ ಸಂಪರ್ಕದ ಕೊರತೆಯಿಂದ ಲೋಕಾರ್ಪಣೆಗೊಂಡಿರಲಿಲ್ಲ. ಶಾಸಕನಾಗಿ ಇದು ನನ್ನ ಗಮನಕ್ಕೆ ಬಂದ ಕೂಡಲೇ ಸಕ್ರಿಯನಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇನೆ. ಕಟ್ಟಹಳ್ಳಿ ಏತ ನೀರಾವರಿಯ ಎರಡನೇ ಹಂತದ ಕಾಮಗಾರಿ, ಗೂಡೇ ಹೊಸಹಳ್ಳಿ ಏತ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. ಲೋಕಸಬಾ ಚುನಾವಣೆಯ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನವೇ ಕಟ್ಟಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿರುವುದು ನನಗೆ ಅತೀವ ಸಂತಸ ತಂದಿದೆ. ಬೂಕನಕೆರೆ ಹೋಬಳಿಯ 50 ಕೆರೆಗಳು ಇಂದಿನ ಬಿರು ಬೇಸಿಗೆಯ ದಿನಗಳಲ್ಲಿ ಹೇಮೆಯ ನೀರಿನಿಂದ ತುಂಬುವುದರಿಂದ ಈ ಭಾಗದ ರೈತ ಸಮುದಾಯ, ಜನ ?ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದು ಅಂತರ್ಜಲ ಮಟ್ಟದ ಹೆಚ್ಚಳ ಸೇರಿದಂತೆ ಅನೇಕ ಅನುಕೂಲಗಳು ಆಗಲಿವೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾನು ತಾಲೂಕಿನ ಜನತೆಯ ಪರವಾಗಿ ಅಭಿನಂಧಿಸುತ್ತೇನೆಂದು ತಿಳಿಸಿರುವ ಶಾಸಕ ಹೆಚ್.ಟಿ.ಮಂಜು ಫೆ.11 ರಂದು ಮದ್ಯಾಹ್ನ 2.30 ಕ್ಕೆ ಕಟ್ಟಹಳ್ಳಿ ಗ್ರಾಮದಲ್ಲಿ ಏತ ನೀರಾವರಿ ಯೋಜನೆಯ ಲೋಕಾರ್ಪಣಾ ಸಮಾರಂಭ ಶಾಸಕನಾದ ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ, ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಜಿಲ್ಲೆಯ ಹಲವು ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದಿದ್ದಾರೆ.