ಬ್ಯಾಡಗಿ,ಜು2: ಕೊಳಚೆ ನಿರ್ಮೂಲನಾ ಮಂಡಳಿ (ಸ್ಲಮ್ ಬೋರ್ಡ) ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರು ನಡೆಸುತ್ತಿರುವ ಕಟ್ಟಡ ಸಾಮಗ್ರಿ ವಿತರಣೆಯಲ್ಲಿ ನಡೆಸುತ್ತಿರುವ ಮೋಸಕ್ಕೆ ಬೇಸತ್ತ ಬಡ ಫಲಾನುಭವಿಗಳು ಹಠಾತ್ ಸ್ಟಾಕ್ ಯಾರ್ಡಗೆ ನುಗ್ಗಿ ಧಾಂಧಲೆ ನಡೆಸಿದ್ದಲ್ಲದೇ ಗುತ್ತಿಗೆದಾರನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ..
ಮದ್ಯಾಹ್ನ 12 ರ ಸುಮಾರಿಗೆ ಸ್ಟಾಕ್ ಯಾರ್ಡ ನುಗ್ಗಿದ ನೂರಾರು ಫಲಾನುಭವಿಗಳು ಕಲ್ಲುಗಳನ್ನಿಟ್ಟು ಪ್ರತಿಭಟನೆ ನಡೆಸಿದರು, ಪಟ್ಟಣದ ಅಗಸನಹಳ್ಳಿ, ವಾಲ್ಮೀಕಿ ಸಂಘ, ಇಸ್ಲಾಂಪೂರ ಬಡಾವಣೆ, ಗಾಂಧಿನಗರ, ಬೆಟ್ಟದ ಮಲ್ಲೇಶ್ವರ ನಗರ ಸೇರಿದಂತೆ ವಿವಿ ಧೆಡೆ ಸುಮಾರು 500 ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುತ್ತಿರುವುದೇನೋ ಸರಿ, ಆದರೆ ಕಟ್ಟಡ ಸಾಮಗ್ರಿಗಳನ್ನು ಸರಿಯಾಗಿ ವಿತರಣೆ ಮಾಡದೇ ಫಲಾನುಭವಿಗಳಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.
ಕೈಕೈ ಮಿಲಾಯಿಸುವ ಹಂತಕ್ಕೆ:ಪ್ರತಿಭಟನೆ ನಡೆಸುತ್ತಿದ್ದ ಕೆಲವರಲ್ಲಿ ಇಟ್ಟಿಗೆ ಕೊಡುತ್ತಿಲ್ಲ ಎಂದರೆ, ಇನ್ನೂ ಕೆಲವರು, ಪಾಯಕ್ಕೆ ಹಾಕಿದ ಮಣ್ಣು ನೀಡುತ್ತಿಲ್ಲ, ಮರಳು ಕಡಿಮೆ ಕೊಡುತ್ತಿದ್ದಾರೆ, ಇನ್ನೂ ಕೆಲವರು ಗೌಂಡಿಗಳಿಗೆ ಹಣ ನೀಡಿಲ್ಲ, ವಿದ್ಯುತ್ ಉಪಕರಣ ನೀಡು ತ್ತಿಲ್ಲ ಹೀಗೆ ಆರೋಪಗಳ ಸುರಿಮಳೆಗೈದರು, ಗುತ್ತಿಗೆದಾರ ನಾಗಾರ್ಜುನ ಎಂಬ ವ್ಯಕ್ತಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು, ಬಡ ಫಲಾನುಭವಿಗಳ ಆಕ್ರೋಶ ಒಂದು ಸಮಯದಲ್ಲಿ ಎಲ್ಲೆಯನ್ನು ಮೀರಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳ ಜೊತೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತವನ್ನು ತಲುಪಿತ್ತು.
ಅಧಿಕಾರಿ ಮತ್ತು ಗುತ್ತಿಗೆದಾರನ ಜೇಬು ಸೇರುತ್ತಿದೆ ಬಡವರ ಹಣ:ಈ ವೇಳೆ ಮಾತನಾಡಿದ ವಾಲ್ಮೀಕಿ ಸಂಘದ ನಾಗರಾಜ ಕರೂರು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ರಾಜ್ಯ ಸರ್ಕಾರ ಫಲಾನುಭವಿಗಳಿಂದ 1 ಲಕ್ಷ ರೂ.ತುಂಬಿಸಿಕೊಂಡು ಒಟ್ಟು 7 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತಿರುವುದೇನೋ ಸರಿ, ಆದರೆ ಇಲ್ಲಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರು ಶಾಮೀಲಾಗಿ ಕಟ್ಟಡ ಸಾಮಗ್ರಿಗಳನ್ನು ಕಡಿಮೆ ಮತ್ತು ಕಳಪೆ ವಿತರಿಸುತ್ತಿದ್ದು, ಸರ್ಕಾರ ಮನೆ ಕಟ್ಟಿಕೊಳ್ಳಲು ಬಡವರಿಗೆ ನೀಡಿದ ಹಣ ನುಂಗುತ್ತಿದ್ದಾರೆ ಎಂದು ಆರೋಪಿಸಿದರು.
7 ಲಕ್ಷಕ್ಕೆ ಲೆಕ್ಕ ಕೊಡಿ: ಚಂದ್ರು ಕರಬಣ್ಣನವರ ಮಾತನಾಡಿ, 17 ಮತ್ತು 21 ಉದ್ದಗಲದ ಮನೆಗೆ ಸರ್ಕಾರ 7 ಲಕ್ಷ ನೀಡುತ್ತಿದೆ, ಆದರೆ ನೀವು ಕೊಡುತ್ತಿರುವ ಕಟ್ಟಡ ಸಾಮಗ್ರಿಗಳು ಕೇವಲ 3 ಲಕ್ಷ ಕೂಡ ದಾಟುತ್ತಿಲ್ಲ, ಅರ್ಧಂಬರ್ಧ ಆಗಿರುವ ಮನೆಗಳನ್ನು ನೋಡಲು ಸಾಧ್ಯವಾಗದೇ ಸಾಲಶೂಲ ಮಾಡಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದೇವೆ ಬಡವರ ಗೋಳನ್ನು ಕೇಳೋರಿಲ್ಲ, ಇದನ್ನು ಪ್ರಶ್ನಿಸಿದವರಿಗೆ ಗುತ್ತಿದಾರರ ಸಿಬ್ಬಂದಿ ಮನಬಂದಂತೆ ಮಾತನಾಡುತ್ತಾರೆ, ಇಂತಹ ವಾತಾವರಣದಲ್ಲಿ ಸರ್ಕಾರ ಯಾವ ಪುರು ಷಾರ್ಥಕ್ಕೆ ಮನೆ ನಿರ್ಮಿಸಿಕೊಡಬೇಕು..? ಎಂದು ಪ್ರಶ್ನಿಸಿದರು.
ಪೂರ್ಣ ಕಟ್ಟಿಕೊಡಿ ಇಲ್ಲವೇ ಕೆಲಸ ನಿಲ್ಲಿಸಿ: ಬಸವರಾಜ ನೆಲೋಗಲ್ಲ ಮಾತನಾಡಿ, ಯಾವುದೇ ಫಲಾನುಭವಿಗಳಿಂದ ಬಿಡಿಗಾಸು ಪಡೆಯದೇ ಇದೇ ಯೋಜನೆಯಡಿಯಲ್ಲಿ ಬೇರೆಡೆಗೆ ಸಂಪೂರ್ಣ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ, ಆದರೆ ಇಲ್ಲಿರುವ ಅಧಿಕಾರಿ ಗಳು ಮತ್ತು ಗುತ್ತಿಗೆದಾರರು ಭ್ರಷ್ಟರಾಗಿದ್ದು ನಮ್ಮಲ್ಲೇ ಕೆಲವರಿಂದ ಗೊತ್ತಿಲ್ಲದಂತೆ ಹಣ ಪಡೆದು ಅಗತ್ಯಕ್ಕಿಂತ ಹೆಚ್ಚು ಸಾಮಗಿ ಪೂ ರೈಸಿದ ಉದಾಹರಣೆಗಳಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನಾಗರಾಜ ಬಳ್ಳಾರಿ, ಸುರೇಶ ಆಲೂರು, ಹನುಮಂತಪ್ಪ ಕರೂರು, ಮೌನೇಶ ನಾಗಪ್ಪ ಉಪ್ಪಾರ, ಬಂಗಾರೆಪ್ಪ, ಪುಟ್ಟಪ್ಪ ಹಾದೀಮನಿ, ಶಾಂತವ್ವ ಬಿರಾದಾರ, ನಿಂಗಪ್ಪ ಬಿರಾದಾರ, ನಾಗಮ್ಮ ಕನವಳ್ಳಿ, ಗಣೇಶ ಕುದರಿಹಾಳ, ಇಂದ್ರವ್ವ ದಾವಣ ಗೇರಿ, ಪ್ರೇಮ ನೆಲೋಗಲ್ಲ, ಗೌರಮ್ಮ ಕುರಕುಂದಿ, ಅಕ್ಕಮ್ಮ ಆಡಿನವರ, ಹನುಮಂತ ಗೂರಣ್ಣನವರ, ಚಂದ್ರು ಕೋಡಿಹಳ್ಳಿ, ಮಂಜು ಬಾಣಾಪುರ, ಮಾರುತಿ ಬಾನಾಳ, ಮಲ್ಲೇಶ ಬಾನಾಳ, ಚಂದ್ರು ರಾರಾವಿ ಕರಿಯಪ್ಪ ಸೇರಿದಂತೆ ಇನ್ನಿತರರಿದ್ದರು.