ಕಟ್ಟಡ ಸಾಮಗ್ರಿ ಮೇಲಿನ ಜಿಎಸ್‌ಟಿ ಕಡಿತಕ್ಕೆ ಒತ್ತಾಯ


ದಾವಣಗೆರೆ,ಡಿ.03: 1996ರ ಕಟ್ಟಡ ನಿರ್ಮಾಣ ಕಾನೂನು ಹಾಗೂ ಸೆಸ್ ಕಾನೂನು ಮತ್ತು 1979ರ ಅಂತರ ರಾಜ್ಯ ವಲಸೆ ಕಾರ್ಮಿಕ ಕಾಯ್ದೆಗಳನ್ನು ಮರು ಸ್ಥಾಪಿಸಬೇಕು. ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಸಲಾಗುವ ಸರಕು ಸೇವಾ ತೆರಿಗೆ ಕಡಿತಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.ನಗರದ ದೇವರಾಜ ಅರಸು ಬಡಾವಣೆಯ ಕಾರ್ಮಿಕ ಇಲಾಖೆ ಕಚೇರಿ ಎದುರು ಜಮಾಯಿಸಿದ ಫೆಡರೇಷನ್ ಕಾರ್ಯಕರ್ತರು, ಕಾರ್ಮಿಕ ಇಲಾಖೆ ಆಯುಕ್ತರ ಮುಖಾಂತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದೇಶದ ಕಟ್ಟಡ ಮತ್ತು ಇತರೆ ನಿರ್ಮಾಣ ವಲಯವು ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣದಿಂದಾಗಿ ತೀವ್ರ ಹಿನ್ನಡೆ ಅನುಭವಿಸಿದೆ. ಅಲ್ಲದೇ, ಸರ್ಕಾರ ಬಳಿಕ ಜಾರಿ ಮಾಡಿದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ನಿರ್ಮಾಣ ವಲಯ ಮತ್ತಷ್ಟು ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಅದರಲ್ಲೂ ಮಹಾಮಾರಿ ಕೊರೊನಾ ಸೋಂಕು ಈ ವಲಯದಲ್ಲಿ ಕೆಲಸ ಮಾಡುತ್ತಿರುವ ಕೋಟ್ಯಾಂತರ ಶ್ರಮಜೀವಿಗಳ ಬದುಕಿನ ಮೇಲೆ ಮಾರಾಣಾಂತಿಕ ದಾಳಿ ಮಾಡಿದೆ. ಹೀಗಾಗಿ, ಕಟ್ಟಡ ಕಾರ್ಮಿಕರು ಜೀವನ ನಡೆಸುವುದು ದುಸ್ರತವಾಗಿದೆ ಎಂದು ಅಳಲು ತೋಡಿಕೊಂಡರು.ಡಿಸೇಲ್ ಹಾಗೂ ಪೆಟ್ರೋಲಿಯಂ ತೈಲ ಬೆಲೆ ಏರಿಕೆಯು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿ ಲಕ್ಷಾಂತರ ಉದ್ಯೋಗಗಳ ನಾಶಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಬಳಿಕ ಅತಿ ಹೆಚ್ಚು ಉದ್ಯೋಗ ಕಲ್ಪಿಸುವ ಕಟ್ಟಡ ನಿರ್ಮಾಣ ಉದ್ಯಮವನ್ನು ರಕ್ಷಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನು 1996 ಹಾಗೂ ಸೆಸ್ ಕಾನೂನು 1996 ಕಾನೂನು ಪುನರ್ ಸ್ಥಾಪಿಸಬೇಕು. ದೇಶದ್ಯಾಂತ ಕಾನೂನುಬದ್ದವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಸಿ ಬಲಪಡಿಸಬೇಕು. ನಿರಂತರವಾಗಿ ಏರಿಕೆಯಾಗುತ್ತಿರುವ ಸಿಮೆಂಟ್, ಕಬ್ಬಿಣ, ಮೊದಲಾದ ಕಟ್ಟಡ ಸಾಮಾಗ್ರಿಗಳ ಬೆಲೆಗಳ ನಿಯಂತ್ರಣ ಮಾಡಬೇಕು ಹಾಗೂ ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಸಲಾಗುತ್ತಿರುವ ಜಿ.ಎಸ್.ಟಿ ಕಡಿತಗೊಳಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಫೆಡರೇಷನ್‌ನ ಸಿಐಟಿಯು ಜಿಲ್ಲಾ ಮುಖಂಡ ಕೆ.ಎಚ್.ಆನಂದರಾಜು, ಫೆಡರೇಷನ್ ಜಿಲ್ಲಾಧ್ಯಕ್ಷ ತಿಮ್ಮಣ್ಣ ಹೊನ್ನೂರು, ಗುಡ್ಡಪ್ಪ.ಎ, ರೆಹಮತ್, ಭರಮಪ್ಪ, ಶಬ್ಬೀರ್ ಮತ್ತಿತರರು ಭಾಗವಹಿಸಿದ್ದರು.