ಕಟ್ಟಡ ಪರವಾನಿಗೆ ನೀಡಲು ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ,ಮಾ31: ಪಟ್ಟಣದಲ್ಲಿ ಮನೆ ಕಟ್ಟಿಸಿಕೊಳ್ಳಲು ಪುರಸಭೆಯ ಪರವಾನಿಗೆ ಅವಶ್ಯ. ಆದರೆ ಪರವಾನಿಗೆ ನೀಡುವಂತೆ ಮಾಲಿಕರು ಅರ್ಜಿ ಕೊಟ್ಟರೂ ಪರವಾನಿಗೆ ಸಿಗುತ್ತಿಲ್ಲ. ಇದರಿಂದಾಗಿ ಮನೆ ಕಟ್ಟಿಸಿಕೊಳ್ಳವವರಿಗೆ ಸಮಸ್ಯೆ ಉಂಟಾಗಿದೆ. ಕಾರಣ ಪರವಾನಿಗೆ ನೀಡುವುದನ್ನು ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿ ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ) ಬಣದ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಅವರಿಗೆ ಮನವಿ ಸಲ್ಲಿಸಿದರು.
‘ಮನೆ ಕಟ್ಟಿಸಿಕೊಳ್ಳುವವರು ಪರವಾನಿಗೆ ಕೇಳಿ ಪುರಸಭೆಗೆ ಅಲೆಯುತ್ತಿದ್ದರೂ ಸಹ ತಾಂತ್ರಿಕ ತೊಂದರೆ ಅಥವಾ ಟೌನ್ ಪ್ಲಾನಿಂಗ್ ಅಪ್ರೂವಲ್ ಆಗಿಲ್ಲ. ಹೀಗಾಗಿ ಪರವಾನಿಗೆ ಕೊಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಶೇ.80ರಷ್ಟು ಮನೆ ಕಟ್ಟಿಸಿಕೊಳ್ಳುವುದು ಮುಗಿದರೂ ಪರವಾನಿಗೆ ಸಿಗುವುದಿಲ್ಲ. ಇದರಿಂದಾಗಿ ವಿದ್ಯುತ್, ನಳದ ಸಂಪರ್ಕ ಪಡೆದುಕೊಳ್ಳಲು ಮಾಲಿಕರು ಪರದಾಡುತ್ತಿದ್ದಾರೆ.
ಏಪ್ರೀಲ್ 16ರ ಒಳಗಾಗಿ ಪರವಾನಿಗೆ ನೀಡಲು ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಕಾರ್ಯಕರ್ತರು ಎಚ್ಚರಿಸಿದರು.
ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ, ನಗರ ಘಟಕದ ಅಧ್ಯಕ್ಷ ಅಪ್ಪು ಉಮಚಗಿ, ಪ್ರಕಾಶ ಕೊಂಚಿಗೇರಿಮಠ, ಆಸ್ಪಾಕ್ ಬಾಗೋಡಿ, ದಾವೂದಖಾನ್ ಕಾರಡಗಿ, ಖೈಸರ್ ಮಹಮ್ಮದ್‍ಅಲಿ, ಮಂಜುನಾಥ ಉಮಚಗಿ, ಮಂಜುನಾಥ ಮಂಟಗಣಿ, ದುದ್ದುಸಾಬ್ ಅಕ್ಕಿ, ಹನಮಂತ ಧುತ್ತರಗಿ ಇದ್ದರು.