
ಬೆಂಗಳೂರು,ಆ.೧- ಅಗತ್ಯ ವಸ್ತುಗಳ ಬೆಲೆಯಿಂದ ನಲುಗಿರುವ ಜನರಿಗೆ ಇದೀಗ ಗೃಹ ಹಾಗೂ ಇತರೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಕಚ್ಚಾವಸ್ತುಗಳ ಬೆಲೆ ಏರಿಕೆ ಯಾಗುತ್ತಿರುವುದು ಗ್ರಾಹಕ ಜೇಬಿಗೆ ಕತ್ತರಿ ಬಿದ್ದಿದೆ.
ಇಂದಿನಿಂದ ಮರಳು, ಜಲ್ಲಿ, ಗ್ರಾನೈಟ್ ಕಬ್ಬಿಣ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಇದರೊಂದಿಗೆ ಹೊಸ ಮನೆ ಕಟ್ಟಬೇಕೆಂಬ ಕನಸು ಕಾಣುತ್ತಿದ್ದವರಿಗೆ ದರ ಏರಿಕೆ ಹೊಡೆತ ಬಿದ್ದಿದೆ.
ಬೆಲೆ ಏರಿಕೆಯಿಂದ ಮನೆ ಕಟ್ಟುವರು ಕಂಗಾಲಾಗಿದ್ದಾರೆ. ದಿನಸಿ, ಹಾಲು-ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು. ಕಬ್ಬಿಣ ಜಲ್ಲಿ, ಗ್ರಾನೈಟ್ ಏರಿಕೆಯೂ ಗ್ರಾಹಕರ ಕೈ ಸುಡುತ್ತಿದೆ.
ಮರಳು, ಎಂ-ಸ್ಯಾಂಡ್, ಜಲ್ಲಿಕಲ್ಲು, ಗ್ರಾನೈಟ್ ಬಂಡೆ, ಕಬ್ಬಿಣ ಸೇರಿದಂತೆ ಮನೆ ನಿರ್ಮಾಣದ ಇನ್ನಿತರ ವಸ್ತುಗಳ ಪರಿಷ್ಕೃತ ಇಂದಿನಿಂದ ದರ ಜಾರಿಗೆ ಬಂದಿದೆ.ಕಳೆದ ಸರ್ಕಾರ ಈ ವರ್ಷ ಶೇ ೧೦ ರಷ್ಟು ರಾಜಧನ ಏರಿಕೆ ಮಾಡಿತ್ತು. ಹೊಸ ಸರ್ಕಾರ ಕೂಡಾ ಮೊದಲ ಬಜೆಟ್ ನಲ್ಲಿ ರಾಜಸ್ವ ಏರಿಕೆ ಮಾಡಿದ್ದು, ನೇರವಾಗಿ ಜನ ಸಾಮಾನ್ಯರಿಗೆ ಇದರ ಬಿಸಿ ತಟ್ಟಲಿದೆ. ಇದರಿಂದ ಮನೆ ಕಟ್ಟುವ ಕಬ್ಬಿಣ, ಅದಿರು, ಜಲ್ಲಿ ಕಲ್ಲು, ಗ್ರಾನೈಟ್, ಮರಳು, ಎಂ. ಸ್ಯಾಂಡ್ ಸೇರಿದಂತೆ ಇನ್ನಿತರೆ ವಸ್ತುಗಳ ಬೆಲೆ ಇಂದಿನಿಂದ ದುಬಾರಿಯಾಗಲಿದೆ.