ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ”.


(ಸಂಜೆವಾಣಿ ಪ್ರತಿನಿಥಿಯಿಂದ)
ಬಳ್ಳಾರಿ, ಜು.25: ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದದಿಂದ ನಗರದ ಕೌಲ್ ಬಜಾರ್‍ನಲ್ಲಿರುವ ಕಾರ್ಮಿಕ ಕಛೇರಿಯ ಮುಂದೆ ಕಟ್ಟಡ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಘದ ಜಿಲ್ಲಾ ಅಧ್ಯಕ್ಷರಾದ ಎ.ದೇವದಾಸ್ ಮಾತನಾಡುತ್ತಾ “ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳ ಶೈಕ್ಷಣಿಕ, ಮದುವೆ, ಹೆರಿಗೆ ಹಾಗೂ ಬಾಕಿ ಇರುವ ಎಲ್ಲಾ ಸಹಾಯಧನ ಕ್ಲೈಂ ಗಳ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಹಾಯವನ್ನು ಬಿಡುಗಡೆ ಮಾಡಬೇಕು. ಮಂಡಳಿಯ ಸಭೆಯಲ್ಲಿ ನಿರ್ಧರಿಸಿದಂತೆ ಪಿಂಚಣಿ, ಮದುವೆ ಹಾಗೂ ಇನ್ನಿತರ ಸಹಾಯಧನ ಹೆಚ್ಚಳವನ್ನು ತಕ್ಷಣ ಜಾರಿಗೊಳಿಸಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ಸಹಾಯಧನ ಒದಗಿಸಬೇಕು ಮತ್ತು ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಲ್ಯಾಣಕ್ಕಾಗಿ ಮಾತ್ರ ವ್ಯಯಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಸಾವಿರಾರು ಕಾರ್ಮಿಕರು ಮದುವೆ, ಹೆರಿಗೆ ಸೇರಿದಂತೆ ಹಲವು ಕ್ಲೈಮ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ಬೆರಳೆಣಿಕೆಯ ಕ್ಲೈಮ್ ಗಳು ಮಾತ್ರ ಅನುಮೋದನೆ ಕೊಂಡಿರುತ್ತವೆ. ಆದರೂ ಸಹ ಸಹಾಯಧನ ಕಾರ್ಮಿಕರ ಖಾತೆಗಳಿಗೆ ಜಮಾ ಆಗಿರುವುದಿಲ್ಲ. ಬಹುತೇಕ ಕ್ಲೈಮ್ ಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಜೊತೆಗೆ ಹಿಂದಿನ ಶೈಕ್ಷಣಿಕ ವರ್ಷಗಳ ಶೈಕ್ಷಣಿಕ ಸಹಾಯಧನ ಕೂಡ ಸಮರ್ಮಕವಾಗಿ ಬಿಡುಗಡೆ ಆಗಿಲ್ಲ. ಈ ಹಿನ್ನಲೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಯಪ್ರವೃತ್ತವಾಗಬೇಕಿದೆ. ಇಲ್ಲವೆಂದರೆ ಕಟ್ಟಡ ಕಾರ್ಮಿಕರು ಹೋರಾಟಗಳನ್ನ ತೀವ್ರಗೊಳಿಸುವ ಅನಿವಾರ್ಯವಾಗುತ್ತದೆ” ಎಂದರು.
ಎಐಯುಟಿಯುಸಿ ಜಿಲ್ಲಾ ಉಪಾಧ್ಯಕ್ಷರಾದ ಎ.ಶಾಂತಾ ಈ ಸಂದರ್ಭದಲ್ಲಿ ಮಾತನಾಡಿದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಎಐಯುಟಿಯುಸಿ ಜಿಲ್ಲಾ ಮುಖಂಡರಾದ ಜಿ.ಸುರೇಶ್ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಉಮಾಮಹೇಶ್, ಜಯರಾಜ್, ವಿಜಯಕುಮಾರ್, ಪ್ರಕಾಶ್, ಹನುಮಂತಪ್ಪ, ಮಂಜು, ಈಶ್ವರ್ ಮುಂತಾದವರು ಉಪಸ್ಥಿತರಿದ್ದರು.