ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ದುರ್ಬಳಕೆ, ಕಾರ್ಮಿಕರಿಂದ ಪ್ರತಿಭಟನೆ

ದೇವದುರ್ಗ.ಸೆ.೨೨- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ಸೋಮಣ್ಣ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ದುರ್ಬಳಕೆ ಮಾಡಿ ಸ್ಲಂ ಬೋರ್ಡ ಫಲಾನುಭವಿಗಳಿಗೆ ನೀಡಿದ್ದಾರೆ.ಇದು ಅರ್ಹ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಗೆದ ದ್ರೋಹವಾಗಿದೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರು ಗುರುವಾರ ಪಟ್ಟಣದ ಎಪಿಎಂಸಿ ಯಿಂದ ಬ್ರಹತ್ ಪ್ರತಿಭಟನೆ ಮೆರವಣಿಗೆ ಮೂಲಕ ದೇವದುರ್ಗದ ಕಟ್ಟಡ ಕಾರ್ಮಿಕರ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು,
ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಕಾರ್ಯದರ್ಶಿ ಶಬ್ಬೀರ್ ಜಾಲಹಳ್ಳಿ ಮಾತನಾಡಿ ೧೯೯೬ ರಲ್ಲಿ ಜಾರಿಗೊಂಡ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕರ್ನಾಟಕದಲ್ಲಿ ೨೦೦೭ ರಿಂದ ನಿಯಮಾವಳಿಗಳನ್ನು ರೂಪಿಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ ೨೦೦೭ ರಿಂದ ಸಂಗ್ರಹವಾಗುತ್ತಿರುವ ಸೆಸ್ ಹಣದಿಂದ ಹಲವು ಕಲ್ಯಾಣ ಯೋಜನೆಗಳನ್ನು ಕಾರ್ಮಿಕರ ಕುಟುಂಬಗಳಿಗೆ ಜಾರಿಗೊಳಿಸಲಾಗುತ್ತಿರುವುದು ಸ್ವಾಗತಾರ್ಹ ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮ೦ತಾಲಯ ೨೦೨೧ ಮಾರ್ಚ್‌ನಲ್ಲಿ ನೀಡಿರುವ ಸ್ಪಷ್ಟ ನಿರ್ದೇಶನದ ಉಲ್ಲಂಘನೆಯಾಗಿದೆ. ಈ ಹಿನ್ನಲೆಯಲ್ಲಿ ಹಣ ನಕಲಿ ಫಲಾನುಭವಿಗಳ ಪಾಲಾಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ತಪ್ಪಿತಸ್ಥ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು,
ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ ಮಂಡಳಿಯ ಪ್ರಮುಖ ಯೋಜನೆಯಾದ ’ವಸತಿ ನಿರ್ಮಾಣಕ್ಕೆ ಸಾಲ ಅಥವಾ ಮುಗಂಡ ಹಣ ಪಾವತಿ ಯೋಜನೆ ಇದುವರೆವಿಗೂ ಒಬ್ಬನೇ ಒಬ್ಬ ಕಟ್ಟಡ ಕಾರ್ಮಿಕನಿಗೂ ದೊರೆತಿಲ್ಲ. ಪರಿಸ್ಥಿತಿ ಹೀಗಿರುವಾಗ ಕಳೆದ ವರ್ಷದಿಂದ ವಸತಿ ಸಚಿವ ಶ್ರೀ ವಿ ಸೋಮಣ್ಣ ಹಾಗೂ ಕಾರ್ಮಿಕ ಸಚಿವರ ಶ್ರೀ ಶಿವರಾಮ ಹೆಬ್ಬಾರ್ ಜತೆ ಸೇರಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ೭ ಕೋಟಿ ಹಣವನ್ನು ’ಕೊಳಚೆ ನಿರ್ಮೂಲನಾ ಮಂಡಳಿ’ಯ ೫೧೨೯ ’ಫಲಾನುಭವಿಗಳಿಗೆ’ ಕಬಳಿಸಿ ರಾಜ್ಯದಲ್ಲಿ ವಸತಿಗಾಗಿ ಹಂಬಲಿಸುತ್ತಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ದ್ರೋಹ ಬಗೆದಿದ್ದಾರೆ. ಎಂದು ಹೇಳಿದರು.ಪಿಡ್ಡಪ್ಪ ನಾಯಕ ಮಾತನಾಡಿದರು.
ಈ ಸಂದರ್ಭದಲ್ಲಿ ಖಜಾಂಚಿ ಯೂಸುಫ್ , ಗುರು ನಾಯಕ, ಬಾಲು ಘೋಷಾಲ್, ಕೊಂಡಯ್ಯ ಘೋಷಾಲ್, ಮೈಬಬೂ , ವಿದ್ಯಾರ್ಥಿ ಮುಖಂಡರಾದ ಮಹಾಲಿಂಗ ದೊಡ್ಡಮನಿ, ಬಾಷ್ ಸಾಬ್ ಶ್ಯಾನರದೊಡ್ಡಿ, ಮಾಳಪ್ಪ, ಮತ್ತು ಇತರರು ಇದ್ದರು.