ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ಐದು ನಿರ್ಣಯಗಳು ಅಂಗೀಕಾರ: ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ.ಗಳ ಸಹಾಯಧನಕ್ಕೆ ಆಗ್ರಹ

ಕಲಬುರಗಿ,ಸೆ.30: ನಗರದ ಕನ್ನಡ ಭವನದಲ್ಲಿ ಜರುಗಿದ ಜಿಲ್ಲಾ ನಾಲ್ಕನೇ ಕಟ್ಟಡ ಕಾರ್ಮಿಕರ ಸಮ್ಮೇಳನದಲ್ಲಿ ಮನೆ ನಿರ್ಮಾಣಕ್ಕಾಗಿ ಐದು ಲಕ್ಷ ರೂ.ಗಳ ಸಹಾಯಧನ ಕೊಡುವುದೂ ಸೇರಿದಂತೆ ಐದು ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆಯ ಕಾನೂನು ಸಲಹೆಗಾರ ಹಾಗೂ ನ್ಯಾಯವಾದಿ ಹಣಮಂತರಾಯ್ ಅಟ್ಟೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಕಟ್ಟಡಲು ನಿವೇಶನ ಇಲ್ಲದವರಿಗೆ ಸರ್ಕಾರ ನಿವೇಶನ ಕೊಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
2021-2022ನೇ ಸಾಲಿನ ಮಕ್ಕಳ ಶಿಷ್ಯವೇತನ ತಡೆಹಿಡಿದಿರುವುದನ್ನು ಕೈಬಿಟ್ಟು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸ್ಕಾಲರ್‍ಶಿಪ್ ಹಣ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ ಅವರು, 2022-2023ನೇ ಸಾಲಿನ ಶಿಷ್ಯವೇತನ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಮಂಡಳಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಯಾದ ಎಐಟಿಯುಸಿ ಒಬ್ಬರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವಂತೆ ಒತ್ತಾಯಿಸಿದ ಅವರು, ನೊಂದಣಿ ಮತ್ತು ನವೀಕರಣ (ಲೇಬರ್ ಕಾರ್ಡ್) ಕಟ್ಟಡ ಕಾರ್ಮಿಕರ ಪ್ರತಿ ವರ್ಷಕ್ಕೊಮ್ಮೆ ಬದಲಾಗಿ ಮೂರು ವರ್ಷಗಳಿಗೊಮ್ಮೆ ಹಿಂದೆ ಇದ್ದ ಆದೇಶವನ್ನು ಮುಂದುವರೆಸುವಂತೆ, ಮೂರು ಮತ್ತು ನಕಲಿ ಲೇಬರ್ ಕಾರ್ಡ್ ರದ್ದುಪಡಿಸುವಂತೆ, ನೈಜ ಕಾರ್ಮಿಕರ ವಿವಿಧ ಸೌಲಭ್ಯಗಳಿಗಾಗಿ ಹಾಕಿರುವ ಕ್ಲೇಮ್ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
60 ವರ್ಷಗಳ ನಂತರ ನಿವೃತ್ತಿ ವೇತನ ಅರ್ಜಿ ಸಲ್ಲಿಸಲು 60 ವರ್ಷ 6 ತಿಂಗಳು ಸಮಯ ನಿಗದಿಪಡಿಸಿರುವ ಆದೇಶವನ್ನು ರದ್ದುಪಡಿಸಿ 60 ವರ್ಷ ಆದ ನಂತರ ಯಾವಾಗಲಾದರೂ ನಿವೃತ್ತಿ ವೇತನಕ್ಕೆ ಅರ್ಜಿ ಹಾಕಲು ಅವಕಾಶ ಕೊಡುವಂತೆ ಅವರು ಒತ್ತಾಯಿಸಿದರು.
ಐದು ನಿರ್ಣಯಗಳ ಜಾರಿಗಾಗಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ ಅವರು, ನಂತರ ಪ್ರತಿನಿಧಿಗಳ ಸಮಾವೇಶ ಜರುಗಿ ಹೊಸ ಜಿಲ್ಲಾ ಸಮಿತಿಯನ್ನು ಚುನಾಯಿಸಲಾಯಿತು. ಅಧ್ಯಕ್ಷರಾಗಿ ಕಾ. ಪ್ರಭುದೇವ್ ಯಳಸಂಗಿ ಅವರು ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಮಾನಪ್ಪ ಇಜೇರಿ, ಮುಬಶೀರ್ ಅನ್ಸಾರಿ, ಪ್ರಧಾನ ಕಾರ್ಯದರ್ಶಿಗಳಾಗಿ ಶಿವಲಿಂಗಮ್ಮ ವಿ. ಲೆಂಗಟಿಕರ್, ಕಾರ್ಯದರ್ಶಿಗಳಾಗಿ ಕಲ್ಯಾಣಿ ತುಕ್ಕಾಣಿ, ಆ. ಯಲ್ಲಪ್ಪ ಮಾಂಗ್, ಶೇಖ್ ಫಯಾಜ್, ಆಸೀಫ್ ಪಾಣೆಗಾಂವ್, ಖಜಾಂಚಿಯಾಗಿ ಶರಣಮ್ಮ ಪೂಜಾರಿ, ಕಾನೂನು ಸಲಹೆಗಾರರಾಗಿ ಹಣಮಂತರಾಯ್ ಅಟ್ಟೂರ್, ಭೀಮಾಶಂಕರ್ ಮಾಡಿಯಾಳ್ ಮತ್ತು 15 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೂತನ ಅಧ್ಯಕ್ಷ ಪ್ರಭುದೇವ್ ಯಳಸಂಗಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಪತಕಿ, ಪ್ರಧಾನ ಕಾರ್ಯದರ್ಶಿ ಶಿವಲಿಂಗಮ್ಮ ಲೆಂಗಟಿಕರ್, ಯಲ್ಲಪ್ಪ ಮಾಂಗ್, ಶರಣಮ್ಮ ಪೂಜಾರಿ, ಕಲ್ಯಾಣಿ ತುಕ್ಕಾಣಿ ಮುಂತಾದವರು ಉಪಸ್ಥಿತರಿದ್ದರು.