ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ-ಶರ್ಫುದ್ದೀನ್

ಮಾನ್ವಿ,ಸೆ.೨೩- ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಆರ್ಹ ಫಲಾನುಭವಿಗಳಿಗೆ ಆಧ್ಯತೆ ಕಲ್ಪಿಸಬೇಕು ಹಾಗೂ ನಕಲಿ ಕಾರ್ಮಿಕರನ್ನು ನೋಂದಣೆಗೆ ತಡೆ ನೀಡುವುದು ಸೇರಿದಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿಐಟಿಯು ತಾಲೂಕಾಧ್ಯಕ್ಷ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ್ ಒತ್ತಾಯಿಸಿದರು.
ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ನಕಲಿ ಕಾರ್ಮಿಕರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಮೂಲಕ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದರು.
ಕೊಳಚೆ ನಿರ್ಮೂಲನಾ ಮಂಡಳಿ ಸೇರಿ ಸರ್ಕಾರಿ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವುದನ್ನು ತಡೆಯುವುದು ಮತ್ತು ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯರಿಗೆ ಮಾತ್ರ ಮನೆ ನಿಮಾಣಕ್ಕೆ ಸಾಲ, ಸಹಾಯಧನ, ಮುಂಗಡ ಹಣ ಪಾವತಿ ಮಾಡುವ ಕ್ರಮ ಜರುಗಿಸಬೇಕು, ೧೫ ವರ್ಷಗಳಿಂದ ನಿರಂತರವಾಗಿ ಕಲ್ಯಾಣ ಮಂಡಳಿ ಸದಸ್ಯರಾಗಿರುವ ವಿವಿಧ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿರುವ ಕಾರ್ಮಿಕರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು, ೨೦೨೨ ಸಾಲಿನಿಂದ ವಾರ್ಷಿಕ ಕನಿಷ್ಠ ೧೫೦೦೦ ಕಾರ್ಮಿಕ ಕುಟುಂಬಗಳು ಸಲ್ಲಿಸಲಾಗಿರುವ ಸ್ವಂತ ಭೂಮಿ ದಾಖಲೆಗಳ ಆಧಾರದಲ್ಲಿಕಾರ್ಮಿಕ ವಸತಿ ನಿರ್ಮಾಣಕ್ಕೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕುಇದ್ದಕ್ಕಾಗಿ ೩೦೦ ಕೋಟಿ ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಕೊಳಚೆ ನಿರ್ಮೂಲನೆ ಮಂಡಳಿ ಪಾವತಿಸಲಾದ ೭೬ ಕೋಟಿ ರೂ. ಕೂಡಲೇ ಮಂಡಳಿ ಖಾತೆಗೆ ವಾಪಸ್ಸು ಪಡೆಯಲು ಆಗತ್ಯ ಕ್ರಮವಹಿಸಬೇಕು, ಸೇವಾ ಸಿಂಧು ತಂತ್ರಾಂಶಕ್ಕೆ ಬದಲಿಯಾಗಿ ಕಾರ್ಮಿಕ ಇಲಾಖೆಗೆ ಪ್ರತ್ಯೇಕ ತಂತ್ರಾಂಶವನ್ನು ಸಿಎಂ ಚಾಲನೆ ನೀಡಿದ್ದು ಸ್ವಾಗತಾರ್ಹ, ಆದರೆ ಸರ್ವರ್ ಸ್ಥಗಿತಗೊಳ್ಳುವ ಸಮಸ್ಯೆಯನ್ನು ಸರಿಪಡಿಸಬೇಕು, ಕಟ್ಟಡ ಕಾರ್ಮಿಕರ ಕಲ್ಯಾಣಮಂಡಳಿಗೆ ಕಟ್ಟಡ ಕಾರ್ಮಿಕರಲ್ಲದವರಿಗೆ ಕಾರ್ಡಗಳನ್ನು ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ ಸೇವಾ ಕೇಂದ್ರ ಮತ್ತು ಗ್ರಾಮ ಓನ್ ಕೇಂದ್ರಗಳಲ್ಲಿ ಇಂತಹ ದಂಧೆ ನಡೆಯುತ್ತಿದೆ ಇದನ್ನು ತಡೆಯಬೇಕು ಹಾಗೂ ಕಾರ್ಮಿಕರ ಇತರೆ ಬೇಡಿಕೆಗಳನ್ನು ಈಡೆರಿಸಬೇಕು. ಇಲ್ಲದಿದ್ದರೆ ಕಟ್ಟಡ ಕಾರ್ಮಿಕರ ಸಂಘ ಹಾಗೂ ಸಿಐಟಿಯು ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೆಚ್.ಶರ್ಫುದ್ದೀನ್ ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ರುದ್ರಪ್ಪನಾಯಕ, ಆಂಜನೇಯ್ಯ ಕೋಟೆ, ಸಿದ್ದಲಿಂಗಯ್ಯ, ಬಡಾ ಮಸ್ತಾನ್, ನಾಯುಡು, ಎಂ.ಡಿ.ಇಮಾಮ್, ಮಹ್ಮದ್‌ರಫಿ, ಚಾಂದ್‌ಪಾಷ, ದುರುಗಪ್ಪ ಮೇಸ್ತ್ರಿ, ಶಬ್ಬೀರ್, ಹುಸೇನ್‌ಮೇಸ್ತ್ರೀ, ಹುಸೇನ್‌ಭಾಷ, ಮಹೆಬೂಬ್‌ಅಲಿ, ನಾಗರಾಜ, ವೆಂಕಟೇಶ, ರಾಮಣ್ಣ, ಬಸವ, ಸಾಧಿಕ್, ರಮೇಶ, ವೆಂಕಟೇಶ, ತಿಮ್ಮಪ್ಪ ಸೇರಿದಂತೆ ಅನೇಕ ಕಟ್ಟಡ ಕಾರ್ಮಿಕರು ಇದ್ದರು.