ಕಟ್ಟಡ ಕಾರ್ಮಿಕರ ನೆರವಿನ ವಾಹನಗಳ ಸೇವಾ ಸೌಲಭ್ಯ ಜೂ. 7ರವರೆಗೆ ವಿಸ್ತರಣೆ

ಕಲಬುರಗಿ,ಮೇ.31:ಮಹಾಮಾರಿ ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಿಸಲು ಜಾರಿಯಾಗಿರುವ ಲಾಕ್‍ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರ ನೆರವಿಗಾಗಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಆರಂಭಿಸಲಾಗಿರುವ ಏಳು ವಾಹನಗಳ ಸೇವಾ ಸೌಲಭ್ಯವನ್ನು ಜೂನ್ 7ರವರೆಗೆ ವಿಸ್ತರಿಸಲು ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ್ ಶೇಗಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ಸಭೆಯಲ್ಲಿ ಸೋಮವಾರ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಮೇ 24ರಂದು ರಸ್ತೆ ಹಾಗೂ ಕಟ್ಟಡ ಕಾರ್ಮಿಕರಿಗೆ ಸಹಾಯ ಮಾಡಲು ಸಂಘವು ಏಳು ವಾಹನಗಳ ಸೌಲಭ್ಯವನ್ನು ಜಾರಿ ಮಾಡಿತ್ತು. ಅವುಗಳ ಇಲ್ಲಿಯವರೆಗಿನ ಕಾರ್ಯನಿರ್ವಹಣೆ ಹಾಗೂ ಖರ್ಚು ವೆಚ್ಚಗಳ ಕುರಿತು ಸಮಗ್ರ ಮಾಹಿತಿಯನ್ನು ಸಭೆಯಲ್ಲಿ ಪಡೆದುಕೊಳ್ಳಲಾಯಿತು.
ಜೂನ್ 7ರವರೆಗೆ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ಆ ಏಳು ವಾಹನಗಳ ಸೇವೆಯನ್ನು ಅಲ್ಲಿಯವರೆಗೆ ವಿಸ್ತರಿಸಬೇಕು ಎಂದು ಸಭೆಯಲ್ಲಿದ್ದ ಕಾರ್ಯದರ್ಶಿಗಳಿಗೆ ಅಧ್ಯಕ್ಷರು ಸೂಚಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ, ನೀರಾವರಿ, ಸಣ್ಣ ನೀರಾವರಿ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆಯಲ್ಲಿನ ಟೆಂಡರ್ ಕುರಿತು ಹಾಗೂ ಇನ್ನಿತರ ವಿಷಯಗಳೊಂದಿಗೆ ಕಾನೂನು ಬಾಹಿರವಾಗಿ ನಡೆಯುತ್ತಿರುವ ಕುರಿತು ಮಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸರ್ಕಾರವು ಈ ಸಂದರ್ಭದಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟು ಜನರಿಗೆ ತೊಂದರೆ ಕೊಡಲಾರದೇ ಎಲ್ಲರ ಬಗ್ಗೆ ಕಾಳಜಿ ವಹಿಸಿಕೊಂಡು ಕೆಲಸ ಮಾಡುತ್ತಿರುವ ಕುರಿತು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಮೊಹಸೀನ್ ಎಂ. ಪಟೇಲ್, ಪ್ರಧಾನ ಕಾರ್ಯದರ್ಶಿ ಸಂಜಯ್ ಆರ್.ಕೆ., ಸರದಾರಯ್ಯ ಗುತ್ತೇದಾರ್, ಸಲೀಮ್ ಅತ್ತಾರ್, ರಾಜಶೇಖರ್ ಪಾಟೀಲ್, ಮನ್ಸೂರ್ ತೊಂಚಿ, ಗುರುನಂಜಯ್ಯಸ್ವಾಮಿ, ಶಿವಾನಂದ್ ಪಾಟೀಲ್, ರಾಜಶೇಖರ್ ಯಂಕಂಚಿ, ಮಡೆಪ್ಪ ಗುತ್ತೇದಾರ್, ಚನ್ನಯ್ಯ ಮಠ್, ಸಿರಾಜ್ ಪಟೇಲ್ ಮುಂತಾದವರು ಪಾಲ್ಗೊಂಡಿದ್ದರು.