ಕಟ್ಟಡ ಉದ್ಘಾಟನೆ

ಮುಂಡಗೋಡ,ಜ19: ಮಾನವೀಯ ಗುಣ ಮತ್ತು ಮೌಲ್ಯಗಳ ಆದಾರದ ಮೇಲೆ ಕೆಲಸ ಮಾಡಿದರೆ ಮಾತ್ರ ತುಳಿತಕ್ಕೊಳಗಾದ ವರ್ಗದ ಮಕ್ಕಳ ಸರ್ವತೋಮುಖ ಏಳ್ಗೆ ಸಾದ್ಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಗಾಂಧಿನಗರದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಾರ್ಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಎಸಿ. ಎಸ್ಟಿ ಮಕ್ಕಳು ಕೂಡ ಮೇಲ್ವರ್ಗದವರಂತೆ ಗುಣಮಟ್ಟ ಶಿಕ್ಷಣ ಪಡೆದು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಸಕಲ ಸೌಲಭ್ಯ ನೀಡುತ್ತಿದೆ. ಮಕ್ಕಳು ವಾಶಿಸುವ ಪ್ರದೇಶದ ವಾತಾವರಣ ಚೆನ್ನಾಗಿದ್ದರೆ ಮಕ್ಕಳು ಭೌತಿಕವಾದ ಒಳ್ಳೆಯ ಶಿಕ್ಷಣ ಪಡೆಯಲು ಸಾದ್ಯ. ಎಲ್ಲ ಮಕ್ಕಳು ತಮ್ಮ ಮಕ್ಕಳೆಂಬ ಭಾವನೆಯಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕೆಲಸ ಮಾಡಬೇಕು ಎಂದ ಅವರು, ತಾಲೂಕಿನ ಪಾಳಾ ಗ್ರಾಮದಲ್ಲಿ 15 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಎಲ್ಲ ಕೆಲ ವರ್ಗದ ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಪ.ಪಂ ಉಪಾಧ್ಯಕ್ಷ ಶ್ರೀಕಾಂತ ಸಾನು, ಮಾಜಿ ಜಿ.ಪಂ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿದರು. ನಿರ್ಮಿತಿ ಇಲಾಖೆ ಅಧಿಕಾರಿ ಕುಮಾರ ಶೆಟ್ಟಿ, ಧುರೀಣ ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ ಮುಂತಾದವರು ಉಪಸ್ಥಿತರಿದ್ದರು. ರಮೇಶ ಪವಾರ ನಿರೂಪಿಸಿದರು. ಅಶೋಕ ಪವಾರ ಸ್ವಾಗತಿಸಿ ವಂದಿಸಿದರು.