ಕಟ್ಟಕಡೆ ವ್ಯಕ್ತಿಗೂ ಸೌಲಭ್ಯ ತಲುಪಿಸಿ

ಕೋಲಾರ, ಡಿ.೧:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ಜನರಿಗಾಗಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು.
ಮುಳಬಾಗಿಲು ನಗರದ ಗಡಿನಾಡ ಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಸಮಸ್ಯೆ ಕುಂದು ಕೊರತೆ ಬಗೆಹರಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ರೈತಾಪಿ ವರ್ಗ, ಕೂಲಿ ಕಾರ್ಮಿಕರು ಯಾವುದೇ ರೀತಿಯ ತಮ್ಮ ಸಮಸ್ಯೆಯ ಬಗ್ಗೆ ಅರ್ಜಿಯನ್ನು ನೀಡಿದರೆ ಅದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ ಅಗತ್ಯವಾದ ಸರ್ಕಾರಿ ಸೌಲಭ್ಯ ತಲುಪಿಸಲಾಗುತ್ತದೆ. ಆದ್ದರಿಂದ ಅರ್ಜಿದಾರರು ಯಾವುದೇ ತಂಟೆ ತಕರಾರು ಮಾಡಿಕೊಳ್ಳದೆ ಪ್ರಾಮಾಣಿಕ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಹಕರಿಸಿದರೆ ಪ್ರತಿಯೊಬ್ಬರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಅಧಿಕಾರಿಗಳಿಗೂ ಸಹ ತುಂಬಾ ಅನುಕೂಲಕರವಾಗುತ್ತದೆ ಎಂದರು.
ಕಂದಾಯ ಇಲಾಖೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕಾದರೆ ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗುತ್ತಿತ್ತು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಕ್ರಿಯಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಜಿಲ್ಲೆಯಲ್ಲಿ ಸುಮಾರು ೫೦೦೦ ಖಾತೆಗಳನ್ನು ಮಾಡಿಕೊಡಲಾಗಿದೆ. ಇದರಿಂದ ಬಹುತೇಕ ಮಂದಿಗೆ ತುಂಬಾ ಉಪಯೋಗವಾಗಿದೆ. ಈ ರೀತಿಯಾಗಿ ಮುಂದಿನ ದಿನಗಳಲ್ಲಿ ಸಹ ಫವತಿ ಖಾತೆಗಳನ್ನು ಮಾಡಲಾಗುವುದು. ಇದಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಆರು ತಿಂಗಳಿಂದ ಕಡತಗಳು ಇತ್ಯರ್ಥವಾಗದೆ ನಮ್ಮ ಜಿಲ್ಲೆಯು ಮೂವತ್ತನೇ ಸ್ಥಾನವನ್ನು ಪಡೆದಿತ್ತು ಈಗ ಆ ಎಲ್ಲಾ ಕಡತಗಳನ್ನು ಪೂರ್ಣಗೊಳಿಸಿದ್ದೇವೆ ನಮ್ಮ ಜಿಲ್ಲೆಯನ್ನು ೧೦ನೇ ಸ್ಥಾನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರಿಗೆ ಬರುವ ಅನುದಾನವನ್ನು ಸಕಾಲದಲ್ಲಿ ಬರುವಂತೆ ಮಾಡಲು ಇಪ್ಪತ್ತು ಸಾವಿರ ರೈತರಿಗೆ ಇ-ಕೆವೈಸಿ ಮಾಡಿಕೊಡುವ ಮೂಲಕ ಎಲ್ಲರಿಗೂ ಸಕಾಲದಲ್ಲಿ ಅವರ ಖಾತೆಗೆ ಹಣ ಜಮೆಯಾಗಿದೆ. ಮೂರು ಲಕ್ಷ ಫಲಾನುಭವಿಗಳು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ. ಇಂತಹ ಹಲವಾರು ರೀತಿಯ ಕಾರ್ಯಕ್ರಮಗಳು ಜಿಲ್ಲಾಡಳಿತದಿಂದ ನಿರಂತರವಾಗಿ ನಡೆಯುತ್ತಿದೆ ಎಂದರು
ಲೋಕಸಭಾ ಚುನಾವಣೆ ಹತ್ತಿರದಲ್ಲೇ ಬರುವುದರಿಂದ ನಾವು ಎಲ್ಲಾ ಮತದಾರರಲ್ಲಿ ಅರಿವನ್ನು ಮೂಡಿಸಿ ಡಿಸೆಂಬರ್ ೯ ರೊಳಗೆ ಎಲ್ಲಾ ಮತದಾರರು ಬಿ ಎಲ್ ಓ ಗಳ ಮುಖಾಂತರ ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಮುಂದಾಗಬೇಕೆಂದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ ಅವರು ಮಾತನಾಡಿ ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿರುವ ವಿಶ್ವಕರ್ಮ ಯೋಜನೆಗೆ ಈಗಾಗಲೇ ೩೨ ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ ಜಿಲ್ಲಾಧಿಕಾರಿಗಳ ಲಾಗಿನ್‌ನಿಂದ ೮೦೦೦ ಅರ್ಜಿಗಳನ್ನು ಸಕ್ರಮಗೊಳಿಸಲಾಗಿದೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಲಾಗಿನ್‌ನಿಂದ ಬರುವ ಅರ್ಜಿಗಳು ನಮ್ಮ ವ್ಯಾಪ್ತಿಗೆ ಬರುತ್ತದೆ ಅದನ್ನು ಯಾವ ಯಾವ ಕಸುಬುಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛೆಯನ್ನು ಆಸಕ್ತಿ ವಹಿಸಿ ಅರ್ಜಿಗಳನ್ನು ಸಲ್ಲಿಸಿರುತ್ತಾರೊ ಅದನ್ನು ಪರಿಗಣಿಸಿ ಕಳುಹಿಸುವ ಅಧಿಕಾರ ಅಧ್ಯಕ್ಷರಿಗೆ ನೀಡಿರುವುದರಿಂದ ಅಂತಹ ಅರ್ಜಿಗಳು ಬಂದರೆ ನಾನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.
ಪಿಂಚಣಿ ವೃದ್ಯಾಪ್ಯ ವೇತನ, ಅಂಗವಿಕಲ ವೇತನ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಯಿತು.
ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಪಂಚಾಯಿತಿ, ಆರೋಗ್ಯ ಇಲಾಖೆ ವತಿಯಿಂದ ಮಳಿಗೆಗಳನ್ನು ತೆರೆದು ಇಲಾಖೆಯಲ್ಲಿ ಸರ್ಕಾರದ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ಡಿ.ಡಿ.ಎಲ್.ಆರ್ ಭಾಗ್ಯಮ್ಮ, ಡಿ.ವೈ.ಎಸ್.ಪಿ ನಂದಕುಮಾರ್, ತಹಶೀಲ್ದಾರ್ ರೇಖಾ, ಗ್ರೇಡ್ ೨ ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ಸರ್ವೇಶ್, ನಗರಸಭೆ ಪೌರಾಯುಕ್ತ ಶ್ರೀಧರ್, ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕಿ ಅನುರಾಧ, ತಾಲ್ಲೂಕು ವೈದ್ಯಾಧಿಕಾರಿ ಸುಗುಣ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.