ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ನೀಡಿದ ಮಿಷನರಿಗಳು

ಬೀದರ್: ‘ಕ್ರೈಸ್ತ ಮಿಷನರಿಗಳು ಎರಡು ಶತಮಾನಗಳಿಂದ ನೆಲಮೂಲ ಸಂಸ್ಕøತಿ ಉಳಿಸಿಕೊಂಡು ಜ್ಞಾನ ಬಿತ್ತರಿಸುವ ಕಾರ್ಯ ಮಾಡಿವೆ. ಶೋಷಿತ ಸಮುದಾಯಗಳ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಶಿಕ್ಷಣ ನೀಡಿದ ಶ್ರೇಯಸ್ಸು ಅವುಗಳಿಗೆ ಸಲ್ಲುತ್ತದೆ’ ಎಂದು ಪುತ್ತೂರಿನ ನಿವೃತ್ತ ಪ್ರಾಚಾರ್ಯ ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.

ಇಲ್ಲಿಯ ಮಂಗಲಪೇಟೆಯ ಎಂ.ಎಂ.ಸಿ. ಮೈದಾನ ಸಮೀಪದ ಸಮುದಾಯ ಭವನದಲ್ಲಿ ರೆವರೆಂಡ್ ಡಿ.ಜೆ.ಟಿ.ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ರೈಸ್ತ ಮಿಷನರಿಗಳು ಧರ್ಮ, ಜಾತಿ, ವರ್ಗ ಹಾಗೂ ವರ್ಣದ ಆಧಾರದಲ್ಲಿ ಶಿಕ್ಷಣ ನೀಡುವಂತಹ ಕೆಲಸವನ್ನೂ ಮಾಡಿಲ್ಲ. ಬದಲಾಗಿ ಮನುಕುಲದ ಕಲ್ಯಾಣಕ್ಕಾಗಿ ಶಿಕ್ಷಣದ ಮೂಲಕ ಹೊಸ ವಿಚಾರಗಳನ್ನು ಬಿತ್ತುವ, ಮಾನವೀಯತೆಯನ್ನು ನೆಲೆಗೊಳಿಸುವ ಕಾರ್ಯ ಮಾಡಿವೆ. ಮಿಷನರಿಗಳು ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿ ಸಮಾನತೆಯನ್ನು ಪ್ರತಿಪಾದಿಸಿವೆ. ಮಿಷನರಿಗಳಲ್ಲಿದ್ದ ಯೇಸುವಿನ ಭಕ್ತರು ಎಂದಿಗೂ ವೈಯಕ್ತಿಕವಾಗಿ ಶ್ರೇಯ ಪಡೆದುಕೊಳ್ಳಲು ಪ್ರಯತ್ನಿಸಿಲ್ಲ’ ಎಂದು ತಿಳಿಸಿದರು.

‘ಕ್ರೈಸ್ತರು ಒಂದನೇ ಶತಮಾನದಲ್ಲೇ ಭಾರತಕ್ಕೆ ಬಂದು ನಿಸ್ವಾರ್ಥ ಸೇವೆ ಆರಂಭಿಸಿದರು. ಇದು ಬಹಳ ಜನರಿಗೆ ತಿಳಿದಿಲ್ಲ. 18ನೇ ಶತಮಾನದ ಆರಂಭದಲ್ಲಿ ಸೇವೆ ವಿಸ್ತರಿಸಿದರು. ಅಂತರರಾಷ್ಟ್ರ್ರೀಯ ಮಟ್ಟದ ಮಿಷನರಿಗಳ ಸಂಘಟನೆ ವಿದೇಶಗಳಿಂದ ಭಾರತಕ್ಕೆ ಬರುತ್ತಿದ್ದ ಮಿಷನರಿಗಳಿಗೆ ಒಂದು ನಿರ್ದಿಷ್ಟ ಪ್ರದೇಶ ಗುರುತು ಮಾಡಿ ಕಳಿಸಿಕೊಡುತ್ತಿತ್ತು. ಇದರಿಂದ ಮಿಷನರಿಗಳು ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು’ ಎಂದು ವಿವರಿಸಿದರು.

‘ಕನ್ನಡದ ಮೊದಲ ಪ್ರಿಂಟಿಂಗ್ ಪ್ರೆಸ್ 1831ರಲ್ಲಿ ಬಳ್ಳಾರಿ, ಇನ್ನೊಂದು 1841ರಲ್ಲಿ ಮಂಗಳೂರಲ್ಲಿ ಆರಂಭವಾಯಿತು. ಅದು ಇಂದಿಗೂ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

‘ಯೇಸುವಿನ ಶಿಷ್ಯ ಸಂತ ಸೋಮನ್ ಕ್ರಿ.ಶ.52ರಲ್ಲೇ ಕೇರಳಕ್ಕೆ ಬಂದು ಧರ್ಮ ಸಭೆಗಳನ್ನು ಸ್ಥಾಪಿಸಿ ಕ್ರಿ.ಶ.72ರವರೆಗೂ ಕಾರ್ಯನಿರ್ವಹಿಸಿದರು. ಕ್ರಿ.ಶ.321ರಲ್ಲಿ ರೋಮನ್ ಕ್ಯಾಥೋಲಿಕ್ ಸನ್ಯಾಸಿಗಳು ಮುಂಬೈಗೆ ಬಂದರು. ನಂತರ ಪೆÇೀರ್ಚುಗೀಸರು, ಗೋವಾಕ್ಕೆ ಬಂದು ಕ್ರೈಸ್ತ ಸಭೆ ಶುರು ಮಾಡಿದರು. ತದನಂತರ ದೇಶದ ವಿವಿಧೆಡೆ ಕ್ರೈಸ್ತ ಸಭೆಗಳು ಆರಂಭವಾದವು. ಹಾಲೆಂಡ್ ಹಾಗೂ ಡೆನ್ಮಾರ್ಕ್‍ನಿಂದ ಪೆÇ್ರಟೆಸ್ಟಂಟ್ ಭಾರತಕ್ಕೆ ಬಂದರು’ ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಸಂಘದ ಲೊಗೊ ಬಿಡುಗಡೆ ಮಾಡಿ ಸಂಘದ ಪದಾಧಿಕಾರಿಗಳಿಗೆ ಶುಭ ಕೋರಿದರು.

ಲೇಖಕ ಜೋಸೆಫ್ ತಿಪ್ಪಣ್ಣ ರಚಿತ ‘ಮೌನಧ್ಯಾನ’ ಕೃತಿಯನ್ನು ಮೆಥೊಡಿಸ್ಟ್ ಕೇಂದ್ರ ಸಭೆಯ ಸಹ ಸಂಚಾಲಕ ರೆ.ದೇವದಾಸ್ ಆನಂದಪ್ಪ ಬಿಡುಗಡೆ ಮಾಡಿದರು. ಲೇಖಕ ದೇವದಾಸ ಆನಂದಪ್ಪ ರಚಿತ ‘ಭಾನುವಾರ ಪಾಠ ಶಾಲಾ ಶಿಕ್ಷಕರ ಕೈಪಿಡಿ’ ಪುಸ್ತಕವನ್ನು ಚಿಂತಕ ಚಂದ್ರಕಾಂತ ಮಸಾನಿ ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಬಿ.ಕೆ.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ರಾಂತ ಸಭಾಪಾಲಕ ಕೆ.ಎನ್. ಭಾಸ್ಕರ್, ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜೈಕರ್ ರತ್ನಪ್ಪ, ಸುವಾರ್ತಾ ಸೇವಕರಾದ ಶಿರೋಮಣಿ ಸೋಲಪುರ, ಮೋಹನದಾಸ ಪೀರಪ್ಪ, ಪುಂಡಲೀಕಪ್ಪ ಗುಮ್ಮಾ, ಮನೋಜಕುಮಾರ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಘಂಟೆ, ಕರ್ನಾಟಕ ರಕ್ಷಣಾ ವೇದಿಕೆ(ಪಿ) ಜಿಲ್ಲಾ ಘಟಕದ ಅಧ್ಯಕ್ಷ ಪೀಟರ್ ಚಿಟಗುಪ್ಪ, ಕರ್ನಾಟಕ ಕ್ರಿಶ್ಚಿಯನ್ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ನಿಡೋದಾ, ಕರ್ನಾಟಕ ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಕುಮಾರ ಸಿದ್ದಪ್ಪ ಗುತ್ತೇದಾರ ಅವರನ್ನು ಸನ್ಮಾನಿಸಲಾಗುವುದು.