ಕಟೋರಿ ಚಾಟ್ ಮಾಡುವ ವಿಧಾನ

ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್!
ಒಳಗಡೆ ತುಂಬಲು : ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ಹೆಸರು ಕಾಳು, ಕಾಬೂಲ್ ಕಡಲೆ ಹಾಕಬಹುದು ಬೇರೆ ಬೇರೆ ಕಾಳು ಮಿಶ್ರಣ ಮಾಡಿ ಅಥವಾ ಯಾವುದೇ ಒಂದು ಕಾಳು ಬೇಕಾದರೂ ಹಾಕಬಹುದು. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ, ಬೆಂದ ಕಾಳು, ಅರ್ಧ ಚಮಚ ಧನಿಯ ಪುಡಿ, ಒಂದು ಚಮಚ ಖಾರಾ ಪುಡಿ, ಉಪ್ಪು, ನಿಂಬೆ ರಸ ಹಾಕಿ ಬಾಡಿಸಿಡಿ. ಈರುಳ್ಳಿ, ಟೊಮೇಟೋ, ಸೌತೇ ಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಕೆ ಹೆಚ್ಚಿಡಿ.
ಹಸಿರು ಚಟ್ನಿ: ಒಂದು ಹಿಡಿ ಕೊತ್ತಂಬರಿ ಸೊಪ್ಪು, ಒಂದು ಹಿಡಿ ಪುದೀನ, ನಾಲ್ಕು ಹಸಿ ಮೆಣಸಿನ ಕಾಯಿ, ಅರ್ಧ ನಿಂಬೆ ರಸ, ಉಪ್ಪು ಹಾಕಿ ರುಬ್ಬಿ ಹಸಿರು ಚಟ್ನಿ ಮಾಡಿಡಿ.
ಸಿಹಿ ಚಟ್ನಿ: ನಾಲ್ಕು ಚಮಚ ಹುಣಿಸೆ ರಸ, ಚೂರು ಬೆಲ್ಲ ಹಾಕಿ ಸ್ವಲ್ಪ ಕುದಿಸಿ ಸಿಹಿ ಚಟ್ನಿ ಮಾಡಿಡಿ.
ಕಟೋರಿ: ಕಟೋರಿಗಾಗಿ ಒಂದು ಲೋಟ ಚಿರೋಟಿ ರವೆ, ಅರ್ಧ ಲೋಟ ಮೈದಾ, ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ತಣ್ಣಗಿರುವ ಬೆಣ್ಣೆ ಉಪ್ಪು, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿಡಿ. (ಮೊದಲು ಅಕ್ಕಿ ಹಿಟ್ಟು ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಕಲೆಸಿ ನಂತರ ಉಳಿದ ಪದಾರ್ಥಗಳನ್ನು ಸೇರಿಸಿ ಕಲೆಸಿ). ಕಲೆಸಿದ ಮಿಶ್ರಣವನ್ನು ಹದಿನೈದು ನಿಮಿಷ ಮುಚ್ಚಿಡಿ. ನಂತರ ಸ್ವಲ್ಪ ನಾದಿ ಪೂರಿಗಿಂತ ಸ್ವಲ್ಪ ದೊಡ್ಡ ಉಂಡೆಗಳನ್ನು ಮಾಡಿ ಆದಷ್ಟೂ ತೆಳ್ಳಗೆ ಲಟ್ಟಿಸಿ, ಸಣ್ಣ ಸಣ್ಣ ಸ್ಟೀಲ್‌ ಬಟ್ಟಲಿನ ಹೊರ ಭಾಗಕ್ಕೆ ಸ್ವಲ್ಪ ಎಣ್ಣೆ ಸವರಿ, ಲಟ್ಟಿಸಿದ ಪೂರಿಯನ್ನು ಬಟ್ಟಲಿಗೆ ಚೆನ್ನಾಗಿ ಅಂಟಿಸಿ, ಸ್ವಲ್ಪ ಒತ್ತಿ, ಪೂರಿಯ ಅಂಚುಗಳನ್ನು ನೆರಿಗೆಯಂತೆ ಮಾಡಿ ಫೋರ್ಕ್‌ ನಿಂದ ಅಲ್ಲಲ್ಲಿ ಚುಚ್ಚಿ, ಬಟ್ಟಲು ಸಮೇತ ಕಾದ ಎಣ್ಣೆಗೆ ಎಚ್ಚರಿಕೆಯಿಂದ ಹಾಕಿ ಬೆಂದ ಮೇಲೆ ಸ್ಟೀಲ್‌ ಬಟ್ಟಲು ಅಂಚನ್ನು ಬಿಡುತ್ತದೆ, ಆಗ ಇಕ್ಕಳ ಮತ್ತು ಚಮಚದ ಸಹಾಯದಿಂದ ಎರಡನ್ನೂ ಬೇರೆ ಬೇರೆ ಮಾಡಿ, ಸ್ಟೀಲ್‌ ಬಟ್ಟಲು ಹೊರ ತೆಗೆದು, ಪೂರಿ ಬಟ್ಟಲುಗಳು ಗರಿ ಗರಿಯಾಗಿ ಇರುವಂತೆ, ಎರಡೂ ಕಡೆ ಬೇಯಿಸಿಡಿ. ನಂತರ ಬಟ್ಟಲುಗಳಲ್ಲಿ ಮೊದಲು ಕಾಳಿನ ಮಿಶ್ರಣ ಹಾಕಿ, ನಂತರ ಅದರ ಮೇಲೆ ಮೊಸರು (ಮೊಸರಿಗೆ ಚೂರು ಸಕ್ಕರೆ ಬೇಕಾದರೆ ಹಾಕಿ), ಹಸಿರು ಚಟ್ನಿ, ಸಿಹಿ ಚಟ್ನಿ, ಈರುಳ್ಳಿ, ಟೊಮೇಟೋ, ಸೌತೇ ಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ, ಸೇವ್ ಹಾಕಿ ತಕ್ಷಣ ತಿನ್ನಲು ಕೊಡಿ. ನೆಂದರೆ ಬಟ್ಟಲುಗಳು ಮೆತ್ತಗೆ ಆಗುತ್ತವೆ.