ಕಟೀಲ್ ಹೇಳಿಕೆಗೆ ಆಕ್ರೋಶ


ಲಕ್ಷ್ಮೇಶ್ವರ,ನ.10- ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲಾಗುವುದು ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ ಕಟೀಲ ಅವರ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ಬಂಜಾರ ಸಮಾಜದ ವತಿಯಿಂದ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲ ವಿಠ್ಠಲ ನಾಯಕ, ಅಶೋಕ ಲಮಾಣ, ಪರಮೇಶ್ವರ ಲಮಾಣಿ ಮಾತನಾಡಿ ‘ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಟೀಲ್ ಅವರು ವರದಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಅವರ ಉದ್ಧಟತನದ ವರ್ತನೆ ಆಗಿದೆ. ವರದಿಗೆ ಸಂಬಂಧಿಸಿದಂತೆ ಇನ್ನೂ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ವರದಿ ಬಗ್ಗೆ ಕಟೀಲ್ ಅವರಿಗೆ ಯಾವುದೇ ತಿಳುವಳಿಕೆ ಇಲ್ಲ. ಹೀಗಿದ್ದರೂ ಇದನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ಖಂಡನೀಯ. ಕಟೀಲರು ಈ ವಿಷಯವನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ಲಂಬಾಣಿ, ಕೊರಚ, ಕೊರಮ, ಸುಡುಗಾಡು ಸಿದ್ಧರು, ಭೋವಿ ಸಮಾಜದವರು ವಿರೋಧಿಸುತ್ತಾರೆ. ವರದಿಯ ಅನುಷ್ಠಾನದ ಕುರಿತು ಹೇಳಿಕೆ ನೀಡಿರುವ ಕಟೀಲ್‍ರು ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಜುನ ಕಾರಭಾರಿ, ಗೌರವಾಧ್ಯಕ್ಷ ಮಹೇಶ ಲಮಾಣಿ ಅಕ್ಕಿಗುಂದ, ಗಣೇಶ ನಾಯಕ, ನಾಗೇಶ ಲಮಾಣಿ, ನಾನಪ್ಪ ಲಮಾಣಿ, ಕೃಷ್ಣ ಲಮಾಣಿ, ರಮೇಶ ಲಮಾಣಿ, ಶಂಕರ ಕಾರಭಾರಿ, ಶೇಕಪ್ಪ ಲಮಾಣಿ, ಎಫ್.ಸಿ. ಪೂಜಾರ, ಕಿರಣ ಆದ್ರಳ್ಳಿ, ಗೋಪಿ ಲಮಾಣಿ, ಸುರೇಶ ಮಾಳಗಿಮನಿ, ಚಂದ್ರು ಲಮಾಣಿ, ಪರಮೇಶ ಲಮಾಣಿ, ಪ್ರಕಾಶ ಲಮಾಣಿ ಇದ್ದರು.