ಕಟೀಲ್ ಭೇಟಿ ಮಾಡಿದ ಸಚಿವಕಾಂಕ್ಷಿ ಶಾಸಕರು

ಬೆಂಗಳೂರು, ನ. ೧೯- ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿ ಶಾಸಕರುಗಳು ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಒತ್ತಡ ಹೇರಿದ್ದಾರೆ.
ಬಿಜೆಪಿಯ ಶಾಸಕರುಗಳಾದ ರೇಣುಕಾಚಾರ್ಯ, ಶಂಕರ್ ಪಾಟೀಲ್ ಮುನಿರಂಗಪ್ಪ, ಲಿಂಗಣ್ಣ ಇವರುಗಳು ಇಂದು ಬಿಜೆಪಿ ಕಛೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಸುಮಾರು ೧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಪಕ್ಷದ ಅಧ್ಯಕ್ಷರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಪಕ್ಷದ ಅಧ್ಯಕ್ಷರ ಗಮನಕ್ಕೆ ಎಲ್ಲ ವಿಷಯಗಳನ್ನು ತಂದಿದ್ದೇವೆ. ವಾಸ್ತವಾಂಶ ತಿಳಿಸಲು ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವು. ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಯಾರನ್ನು ಕೈಬಿಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು.
ಸರ್ಕಾರ ಬಂದು ಒಂದೂವರೆ ವರ್ಷವಾಗಿದೆ. ಕೆಲ ಸಚಿವರನ್ನು ಕೈಬಿಡಬೇಕು ಎಂಬುದು ಬಹಳಷ್ಟು ಶಾಸಕರ ಅಭಿಪ್ರಾಯವಾಗಿದೆ. ೩-೪ ಬಾರಿ ಗೆದ್ದವರನ್ನು ಮಂತ್ರಿ ಮಾಡಲಾಗುತ್ತದೆ. ಈ ವಿಚಾರವನ್ನು ರಾಜ್ಯಾಧ್ಯಕ್ಷರಿಗೆ ಹೇಳಿದ್ದೇವೆ ಎಂದರು.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮೂರು ನಾಲ್ಕು ಬಾರಿ ಗೆದ್ದವರನ್ನು ಮಂತ್ರಿ ಮಾಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಒತ್ತಾಯಿಸಿದ್ದೇವೆ. ಮುಂದಿನ ಉಪಚುನಾವಣೆ, ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ನನಗೆ ಸಚಿವ ಸ್ಥಾನ ಕೊಡಿ ಎಂದು ನಾನು ಕೇಳುತ್ತಿಲ್ಲ. ಗೆದ್ದಿರುವ ಶಾಸಕರಿಗೆ ಕೊಡಬೇಕು. ಚುನಾವಣೆಯಲ್ಲಿ ಸೋತಿರುವವರಿಗೆ ಅಲ್ಲ. ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.
ವಿಧಾನಪರಿಷತ್ ಸದಸ್ಯ ಸಿ.ಪಿಯ ಯೋಗೇಶ್ವರ್ ರವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಮ ರಾಮ ರಾಮ ಅಂತ ಹೇಳುತ್ತಾ ಹೋದರೆ ಅದು ರಾವಣ ಆಗುತ್ತದೆ. ನಾನು ಯಾವುದನ್ನು ಎಲ್ಲಿಗೆ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸಿದ್ದೇನೆ. ನನ್ನ ಬಾಯಲ್ಲಿ ಅವರ ಹೆಸರು ಹೇಳಲ್ಲ ಅವರೇನೂ ಅಷ್ಟು ದೊಡ್ಡವರಾ, ಪಕ್ಷಕ್ಕಿಂತ ದೊಡ್ಡವರಾ ಎಂದು ರೇಣುಕಾಚಾರ್ಯ ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಮುನಿರತ್ನ ಭೇಟಿ
ಇದೇ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮುನಿರತ್ನ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಅವರನ್ನು ಸನ್ಮಾನಿಸಿ, ಗೆಲುವಿಗೆ ಸಹಕಾರ ನೀಡಿದ್ದಕ್ಕೆ ಧನ್ಯವಾದ ಹೇಳಿದರು.