ಕಟೀಲ್ ಕಾಮಿಡಿ ನಟ: ಕೈ ಲೇವಡಿ


ಬೆಂಗಳೂರು,ನ.೨- ಮಂಗನ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗುತ್ತದೆ ಎಂಬ ಗಾದೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಕ್ಷಿ ಎಂದು ಪ್ರದೇಶ ಕಾಂಗ್ರೆಸ್ ಲೇವಡಿ ಮಾಡಿದೆ. ಈ ಮೂಲಕ ಕಾಂಗ್ರೆಸ್-ಬಿಜೆಪಿ ನಡುವಣ ವಾಕ್ಸಮರ ತಾರಕಕ್ಕೇರಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರದೇಶ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಸ್ಥಿತಿ ನಾಯಿಪಾಡು ಎಂದು ಕಟೀಲು ಟೀಕೆಗೆ ವ್ಯಂಗ್ಯಭರಿತ ಶೈಲಿಯಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.
ಸರಣಿ ಟ್ವೀಟ್‌ನಲ್ಲಿ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅವರ ಮಾತಿನಲ್ಲು ಘನತೆ-ಗೌರವ, ಬದ್ಧತೆ ಯಾವುದೂ ಇಲ್ಲ ಎಂದು ಕಿಡಿಕಾರಿದೆ. ಪದೇ ಪದೇ ಬಹಿರಂಗವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕನಿಷ್ಠ ನೋಟಿಸ್ ಕೊಡಲು ಸಾಧ್ಯವಾಗಿಲ್ಲ. ಪ್ರಧಾನಿ ಅವರ ಭೇಟಿಗೆ ಮುಖ್ಯಮಂತ್ರಿಯವರಿಗೆ ಅವಕಾಶ ಕಲ್ಪಿಸಿಲ್ಲ. ಇದನ್ನು ಗಮನಿಸಿದರೆ ಯಡಿಯೂರಪ್ಪ ಬಿಜೆಪಿಯಲ್ಲಿ ಯಾವ ಪಾಡಿನಲ್ಲಿದ್ದಾರೆ ಎಂಬುದನ್ನು ತಿಳಿಸುತ್ತದೆ. ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟೀಕಿಸಿದೆ. ಬಿಜೆಪಿ ಮಾನ ಹರಾಜು ಹಾಕಲು ಕಟೀಲ್ ಒಬ್ಬರೆ ಸಾಕು. ಅವರು ಇದೇ ರೀತಿ ಮಾತನಾಡುತ್ತ ಬಿಜೆಪಿಯ ಬಣ್ಣ ಬಯಲು ಮಾಡುತ್ತಲೇ ಇರಲಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.