ಕಟೀಲ್ ಆಡಿಯೋ ಸಿ.ಎಂ. ಬದಲಾವಣೆ ಬಹಿರಂಗ

ಬೆಂಗಳೂರು, ಜು. ೧೯- ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವ ಬದಲಾಗಲಿದೆ. ಜುಲೈ ಅಂತ್ಯದೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿರುವಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ. ಹೊಸ ಮುಖ್ಯಮಂತ್ರಿ ದೆಹಲಿಯಿಂದ ಬರಲಿದ್ದಾರೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಾತನಾಡಿರುವ ಆಡಿಯೋ ಬಹಿರಂಗಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತುಳು ಭಾಷೆಯಲ್ಲಿ ತಮ್ಮ ಆಪ್ತರೊಂದಿಗೆ ಮಾತನಾಡಿರುವ ಈ ಆಡಿಯೋ ವೈರಲ್ ಆಗಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸುದ್ದಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ವೈರಲ್ ಆಗಿರುವ ಆಡಿಯೋದಲ್ಲಿ ನಳಿನ್‌ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಹುದ್ದೆ ಮೂರು ಹೆಸರುಗಳು ಇವೆ. ದೆಹಲಿಯಿಂದಲೇ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಹೇಳಿರುವುದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ. ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಯಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಿದೆ.
ಇದರ ಜತೆಗೆ ಕಟೀಲ್ ಅವರು ಸಚಿವರಾದ ಜಗದೀಶ್‌ಶೆಟ್ಟರ್ ಮತ್ತು ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ಸಚಿವರುಗಳನ್ನು ಕೈ ಬಿಟ್ಟು, ಹೊಸ ತಂಡವನ್ನು ಕಟ್ಟಲಾಗುವುದು. ಮುಂದೆ ಯಾರೇ ಬಂದರೂ ನಮಗೆ ಬೇಕಾದವರೆ ಬರಲಿದ್ದಾರೆ. ನಾವು ಹೇಳಿದಂತೆಯೇ ಎಲ್ಲವೂ ನಡೆಯಲಿದೆ ಎಂದು ಹೇಳಿರುವುದು ಹಿರಿಯ ಸಚಿವರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರು ಕೆರಳುವಂತಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ ಎಂಬ ಯಡಿಯೂರಪ್ಪನವರ ಹೇಳಿಕೆಗೆ ವ್ಯತಿರಿಕ್ತವಾಗಿ ಕಟೀಲ್ ಅವರು ಮಾತನಾಡಿರುವುದು ಮುಂದೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ನಿಶ್ಚಿತ ಎಂಬುದನ್ನು ದೃಢಪಡಿಸಿದಂತಿದೆ.
ನಕಲಿ: ತನಿಖೆಗೆ ಕಟೀಲು ಆಗ್ರಹ
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ತಾವು ಮಾತನಾಡಿರುವ ಆಡಿಯೋ ನಕಲಿಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ನಳಿನ್‌ಕುಮಾರ್ ಕಟೀಲ್ ಮಂಗಳೂರಿನಲ್ಲಿಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪನವರು ನಮ್ಮ ಸರ್ವ ಸಮ್ಮತ ನಾಯಕ ಎಂದು ಕಟೀಲು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಪಕ್ಷಕ್ಕೆ ಆತ್ಮ ಇದ್ದಂತೆ. ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಇವರುಗಳು ಪಕ್ಷದ ಎರಡು ಕಣ್ಣುಗಳಿದ್ದಂತೆ. ಇವರ ವಿರುದ್ಧ ನನಗ್ಯಾಕೆ ಅಸಮಾಧಾನ. ಆಡಿಯೋ ನಕಲಿ, ತಾವು ಆ ರೀತಿ ಎಲ್ಲಿಯೂ ಮಾತನಾಡೇ ಇಲ್ಲ ಎಂದು ಕಟೀಲು ಹೇಳಿದರು.
ಈ ಆಡಿಯೋವನ್ನು ಯಾರು ಹರಿಯಬಿಟ್ಟಿದ್ದಾರೆ ಎಂಬ ಬಗ್ಗೆ ನಿರ್ಧಿಷ್ಟ ವ್ಯಕ್ತಿಗಳ ಬಗ್ಗೆ ಅನುಮಾನಗಳು ಇಲ್ಲ. ಆದರೆ ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಹೀಗಿರುವಾಗ ತಾವು ಈ ರೀತಿ ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.