ಕಚ್ಛಾ ವಸ್ತುಗಳ ಪೂರೈಕೆಗೆ ಯುಎಸ್ ಅಸ್ತು

ನವದೆಹಲಿ, ಏ.೨೬- ವ್ಯಾಕ್ಸಿನ್ ತಯಾರಿಕೆಗೆ ಬೇಕಾಗುವ ಕಚ್ಛಾ ವಸ್ತುಗಳ ಮೇಲೆ ವಿಧಿಸಿದ್ದ ರಫ್ತು ನಿರ್ಬಂಧವನ್ನು ಕೊನೆಗೂ ಅಮೆರಿಕಾ ಸಡಿಲಿಸಿದೆ. ಇದೀಗ ನಡೆದ ಬೆಳವಣಿಗೆಯಲ್ಲಿ ಲಸಿಕೆ ತಯಾರಿಕೆಗೆ ಬೇಕಾಗುವ ಕಚ್ಛಾ ವಸ್ತುಗಳನ್ನು ಭಾರತಕ್ಕೆ ಪೂರೈಸಲು ಅಮೆರಿಕಾ ನಿರ್ಧರಿಸಿದೆ.
ಭಾರತದ ರಾಷ್ಟೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಹಾಗೂ ಅಮೆರಿಕಾದ ಎನ್‌ಎಸ್‌ಎ ಜ್ಯಾಕ್ ಸುಲಿವಾನ್ ನಡುವಿನ ಮಾತುಕತೆ ಇದೀಗ ಫಲಪ್ರದವಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ವಿಶ್ವದಲ್ಲೇ ಲಸಿಕೆ ಉತ್ಪಾದಿಸುವ ಅತೀ ದೊಡ್ಡ ದೇಶವಾದರೂ ಲಸಿಕೆ ತಯಾರಿಕೆಗೆ ಬೇಕಾಗುವ ಕಚ್ಛಾ ವಸ್ತುಗಳನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಅಮೆರಿಕಾ ಇತ್ತೀಚಿಗೆ ಕಚ್ಛಾ ವಸ್ತುಗಳ ಆಮದು ಮೇಲೆ ನಿರ್ಬಂಧ ಹೇರಿದ್ದು, ಭಾರತಕ್ಕೆ ದೊಡ್ಡ ತಲೆನೋವು ತಂದಿತ್ತು. ಮುಖ್ಯವಾಗಿ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಇಇ)ದ ಮುಖ್ಯಸ್ಥ ಆದಾರ್ ಪೂನಾವಾಲಾ ಸ್ವತಹ ತಾವೇ ಅಮೆರಿಕಾ ಅಧ್ಯಕ್ಷರಲ್ಲಿ ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ದೋವಲ್ ಹಾಗೂ ಸುಲಿವಾನ್ ನಡುವಿನ ಮಾತುಕತೆ ಫಲ ನೀಡಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಇದೀಗ ಭಾರತಕ್ಕೆ ಕಚ್ಛಾ ವಸ್ತುಗಳನ್ನು ಪೂರೈಸಲು ಅನುಮತಿ ನೀಡಿದೆ. ಲಸಿಕೆ ತಯಾರಿಕೆಗೆ ಬೇಕಾಗುವ ಕೆಲವು ಅಗತ್ಯ ವಸ್ತುಗಳನ್ನು ಭಾರತಕ್ಕೆ ತಕ್ಷಣವೇ ಪೂರೈಸಲಾಗುವುದು ಎಂದು ಅಮೆರಿಕಾ ತಿಳಿಸಿದೆ. ಅದೂ ಅಲ್ಲದೆ ಸದ್ಯ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸಲಕರಣೆಗಳ ಸರಬರಾಜು ಮಾಡಲು ಕೂಡ ಅಮೆರಿಕಾ ನಿರ್ಧರಿಸಿದೆ.