ಕಚ್ಚಾ ವಸ್ತುಗಳ ಬೆಲೆ ಕಡಿತಕ್ಕೆ ಒತ್ತಾಯಿಸಿ ಮನವಿ


ಬ್ಯಾಡಗಿ,ಮಾ.23: ಮುದ್ರಣ ಸಾಮಗ್ರಿಗಳ ಬೆಲೆ ಏರಿಕೆಯಿಂದ ಮುದ್ರಣ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರವು ಮುದ್ರಣಕ್ಕೆ ಬೇಕಾದ ಕಚ್ಚಾವಸ್ತುಗಳ ಬೆಲೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ತಾಲೂಕಾ ಮುದ್ರಣಕಾರರ ಘಟಕದ ಮಾಲೀಕರು ಹಾಗೂ ಕಾರ್ಮಿಕರು ದಿ. 22ರಂದು ಕೈತೋಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಮುದ್ರಣ ಘಟಕದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ತಹಶೀಲ್ದಾರ ಅವರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ಸಂಘದ ಅಧ್ಯಕ್ಷ ಗಿರೀಶಸ್ವಾಮಿ ಇಂಡಿಮಠ, ಮುದ್ರಣಾಲಯಗಳಲ್ಲಿ ಅಗತ್ಯವಾಗಿರುವ ಕಾಗದ, ಬೋರ್ಡ್, ಇಂಕ್, ಕೆಮಿಕಲ್ ಸೇರಿ ಇತರೆ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುದ್ರಕರಿಗೂ ಮತ್ತು ಗ್ರಾಹಕರಿಗೂ ಬಹಳಷ್ಟು ಹೊರೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕಾರ್ಯದರ್ಶಿ ಉದಯ ಚೌಧರಿ ಮಾತನಾಡಿ, ಮುದ್ರಣಕ್ಕೆ ಬೇಕಾಗುವ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಮುದ್ರಣದ ಬೆಲೆಯಲ್ಲಿ ಹೆಚ್ಚಳ ಮಾಡುವುದು ಅನಿವಾರ್ಯ, ಆದರೆ ಇದರಿಂದ ಮುದ್ರಣಕಾರರ ಹಾಗೂ ಗ್ರಾಹಕರ ನಡುವೆ ಸಂಬಂಧ ಹದಗೆಡುವ ಸಾಧ್ಯತೆಗಳಿವೆ. ಅಲ್ಲದೇ ಮುದ್ರಣಾಲಯದಲ್ಲಿ ಕೆಲಸ ಮಾಡುವ ಎಷ್ಟೋ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಕಚ್ಚಾವಸ್ತುಗಳ ಬೆಲೆ ಕಡಿತಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಚೇತನ ಹುಬ್ಬಳ್ಳಿ, ನೀಲಕಂಠಪ್ಪ ಹಾದಿಮನಿ, ಲೋಹಿತ್ ಹೆಡಿಯಾಲ, ಕರಬಸಪ್ಪ ಮರಿಗೌಡರ,
ಸುಭಾಸಗೌಡ ಪಾಟೀಲ, ಫಕ್ಕೀರಯ್ಯ ಓದಿಸೋಮಠ, ಚನ್ನಬಸಪ್ಪ ಬನ್ನಿಹಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.