ಕಚ್ಚಾ ರಸ್ತೆ ನಿರ್ಮಿಸಿದ ಎನ್.ಎಸ್.ಎಸ್ ಸ್ವಯಂ ಸೇವಕರು

ಕಲಬುರಗಿ,ಜು.20: ವಿದ್ಯಾರ್ಥಿ ದೆಸೆಯಿಂದಲೇ ಸೇವಾಮನೋಭಾವನೆ, ತ್ಯಾಗ, ಶಿಸ್ತು, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯಗಳಂತಹ ಅನೇಕ ಮೌಲ್ಯಗಳನ್ನು ಮೈಗೂಡಬೇಕು ಎಂಬ ಉದ್ದೇಶದಿಂದ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್)ಯ ತತ್ವಗಳನ್ನು ಅಳವಡಿಸಿಕೊಂಡಿರುವ ಜೇವರ್ಗಿಯ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರು ಕಚ್ಚಾ ರಸ್ತೆ ನಿರ್ಮಿಸಿ ಚಲನೆಗೆ ಅನಕೂಲ ಮಾಡಿಕೊಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಾವಿಯಂತಾದ ಕಾಲೇಜಿನ ಹಿಂದುಗಡೆಯಿರುವ ಸರ್ಕಾರಿ ಪ್ರೌಢಶಾಲೆಯ ಆವರಣ, ಅಲ್ಲಿ ಸಂಚರಿಸಲು ವಿದ್ಯಾರ್ಥಿಗಳಿಗಾಗುತ್ತಿರುವ ತೊಂದರೆಯನ್ನು ಗಮನಿಸಿದ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಅವರು, ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಕಾಲೇಜಿನ ಎನ್.ಎಸ.ಎಸ್ ಘಟಕದ ಸ್ವಯಂ ಸೇವಕರೊಂದಿಗೆ ಗುರುವಾರ ಮಧ್ಯಾಹ್ನ ಶ್ರಮಾದಾನದ ಮೂಲಕ ಸ್ವಚ್ಛಗೊಳಿಸಿದರು. ಕಾಲುವೆ ಮಾಡಿ ನೀರು ಸರಾಗವಾಗಿ ಚಲಿಸುವಂತೆ ಮಾಡಿದರು. ಪರ್ಸಿ ಕಲ್ಲುಗಳು, ಮರಳು ಮಿಶ್ರಿತ ಮಣ್ಣನ್ನು ಹಾಕಿ ತಾತ್ಕಾಲಿಕವಾಗಿ ರಸ್ತೆಯನ್ನು ನಿರ್ಮಿಸಿದರು. ಇದರಿಂದ ಶಾಲೆಯ ಅನೇಕ ವಿದ್ಯಾರ್ಥಿಗಳಿಗೆ ಅನಕೂಲವಾಯಿತು.
ಸ್ವಯಂ ಸೇವಕರ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್ ಅಲ್ಲಾಉದ್ದೀನ್ ಸಾಗರ, ಎನ್.ಎಸ್.ಎಸ್ ತತ್ವಗಳು ಕೇವಲ ಬೋಧನೆ-ಆಲಿಸಲು ಇರುವುದಿಲ್ಲ. ಅವುಗಳನ್ನು ಕಾರ್ಯರೂಪಕ್ಕೆ ತಂದರೆ ಇಂತಹ ಸಮಾಜಮುಖಿ ಕಾರ್ಯಗಳು ಸಾಧ್ಯವಾಗುತ್ತವೆ. ವಿದ್ಯಾರ್ಥಿ ಇರುವಾಗಲೇ ನಿಮ್ಮಲ್ಲಿ ಸಮಾಜ ಸೇವಾ ಮನೋಭಾವ ಮೂಗೂಡಿದಿರೆ, ಮುಂದೆ ನೀವು ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಸ್ವಯಂ ಸೇವಕರ ಈ ಕಾರ್ಯಕ್ಕೆ ಉರ್ದು ಪ್ರೌಢಶಾಲೆಯ ಸಮಸ್ತ ಸಿಬ್ಬಂದಿ, ವಿದ್ಯಾರ್ಥಿಗಳು ಮುಕ್ತ ಕಂಠದಿಂದ ಶ್ಲಾಘಿಸಿ, ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.