ಕಚೇರಿ ಮುಂದೆಯೇ ಮೂಲೆಗೆ ಸೇರುತ್ತಿದೆ ಸಕ್ಕಿಂಗ್ ಯಂತ್ರ. ತುಕ್ಕು ಹಿಡಿಯುತ್ತಿರುವ ಶೌಚಾಲಯ ಸ್ವಚ್ಛತೆಗೆ ಬಳಸುವ 5ಲಕ್ಷ ರೂ.ಯಂತ್ರ.

ಕೂಡ್ಲಿಗಿ.ನ.0 6: ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಎನ್ನುವ ಸರ್ಕಾರದ ಘೋಷಣಾ ವಾಕ್ಯಗಳು ಕೇಳುವುದಕ್ಕಷ್ಟೇ ಚಂದ, ಹಳ್ಳಿಗಳಲ್ಲಿ ಶೌಚಾಲಯ ಬಳಕೆಯಾಗಬೇಕು, ಶೌಚಾಲಯಗಳು ತುಂಬಿದಾಗ ಅದನ್ನು ಶೌಚಗುಂಡಿಗಳ ತ್ಯಾಜ್ಯವನ್ನು ಹೀರಲು ಸಕ್ಕಿಂಗ್ ಯಂತ್ರವನ್ನು ಸರ್ಕಾರ ಕೂಡ್ಲಿಗಿ ತಾಲೂಕು ಪಂಚಾಯ್ತಿಗೆ ಮುಂಜೂರು ಮಾಡಿ ೫ ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಬಳಕೆಯಾಗದೇ ಕಚೇರಿ ಮುಂದೆಯೇ ಮೂಲೆ ಸೇರುತ್ತಿರುವುದು ದುರಂತವೇ ಸರಿ. 2014-15ನೇ ಸಾಲಿನಲ್ಲಿ ಕೂಡ್ಲಿಗಿ ತಾಲೂಕು ಪಂಚಾಯ್ತಿಗೆ ಮಂಜೂರಾದ ಸಕ್ಕಿಂಗ್ ಯಂತ್ರ ಗ್ರಾಮೀಣ ಪ್ರದೇಶದ ಶೌಚಾಲಯಗಳ ತ್ಯಾಜ್ಯ ಹೊರತೆಗೆಯಲು ಬಳಕೆಯಾಗದೇ ತಾಲೂಕು ಪಂಚಾಯ್ತಿ ಪಕ್ಕದಲ್ಲಿಯೇ ಮೂಲೆಗೆ ನಿಲ್ಲಿಸಿದ್ದು ಈ ಯಂತ್ರಗಳು ತುಕ್ಕು ಹಿಡಿಯಲು ಪ್ರಾರಂಭಿಸಿದ್ದು ಸರ್ಕಾರದ ಲಕ್ಷಗಟ್ಟಲೇ ಹಣ ಸುಮ್ಮನೇ ಹಾಳಾಗುತ್ತಿದೆ. ಸರ್ಕಾರದ ಕೆಲವು ಯೋಜನೆಗಳೇ ಈಗೇ, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡುವುದಿಲ್ಲ ಎನ್ನುವಂತಾಗುತ್ತಿವೆ. ಈ ಸಕ್ಕಿಂಗ್ ಯಂತ್ರವನ್ನು ಶೌಚಾಲಯ ಗುಂಡಿಗಳನ್ನು ಸ್ವಚ್ಚ ಮಾಡಲು ಬಳಕೆ ಮಾಡಲು ಯಾಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸ್ವಚ್ಛತೆಗೆ ಸರ್ಕಾರ ಮೊದಲ ಆದ್ಯತೆ ನೀಡುತ್ತದೆ ಆದರೆ ಇಲ್ಲಿ ಸ್ವಚ್ಛತೆ ಮಾಡುವ ಯಂತ್ರಗಳನ್ನೇ ಉಪಯೋಗ ಮಾಡದೇ ಈಗ ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಮುಂದೆ ಮೂಲೆಯಲ್ಲಿ ನಿಲ್ಲಿಸಿರುವುದು ಇಲ್ಲಿಯ ಆಡಳಿತದ ವೈಖರಿಯನ್ನು ತೋರಿಸುತ್ತದೆ.

ತಾ.ಪಂ.ಸಕ್ಕಿಂಗ್ ಯಂತ್ರ ಪಟ್ಟಣ ಪಂಚಾಯ್ತಿಗೆ ಶಿಪ್ಟ್ಃ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳು ತಾಲೂಕು ಪಂಚಾಯ್ತಿಗೆ ಬರುತ್ತವೆ. ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದೇ ಮಾಲಿನ್ಯ ತಾಂಡವಾಡುತ್ತಿದೆ ಹಳ್ಳಿಗಳಲ್ಲಿ ಶೌಚಾಲಯಗಳಿದ್ದು ಅಲ್ಲಿಯ ತ್ಯಾಜ್ಯಗಳನ್ನು ಎತ್ತಲು ಅವಶ್ಯಕತೆ ಇದ್ದಕಡೆ ಕಳುಹಿಸಬಹುದಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಪಟ್ಟಣ ಪಂಚಾಯ್ತಿಗೆ ಅವಶ್ಯಕತೆ ಇದೆ ಎಂದು ಹೇಳಿದಾಕ್ಷಣ ಈ ಯಂತ್ರವನ್ನು ಪಟ್ಟಣ ಪಂಚಾಯ್ತಿಯವರ ಸುಪರ್ದಿಗೆ ಕೊಟ್ಟಿರುವುದಾಗಿ ತಾಲೂಕು ಪಂಚಾಯ್ತಿ ಅಧಿಕಾರಿಗಳು ಹೇಳುತ್ತಾರೆ. ಈಬಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಽಕಾರಿಗಳನ್ನು ಕೇಳಿದರೆ ಈ ಸಕ್ಕಿಂಗ್ ಯಂತ್ರ ನಮ್ಮದಲ್ಲ ಎನ್ನುತ್ತಾರೆ. ಗಂಡ ಹೆಂಡತಿ ನಡುವೆ ಕೂಸು ಬಡವಾದಂತೆ ಈ ಯಂತ್ರಗಳಂತೆ ಹತ್ತಾರು ಯೋಜನೆಗಳು ಜನತೆಗೆ ತಲುಪದೇ ಅಧಿಕಾರಿಗಳ ಗೊಂದಲಗಳಲ್ಲಿಯೇ ಸೌಲಭ್ಯಗಳು ಹಳ್ಳ ಹಿಡಿಯುತ್ತಿವೆ.


ಈಗ್ಗೆ 5 ವರ್ಷಗಳ ಹಿಂದೆ ಸರ್ಕಾರ ಈ ಸಕ್ಕಿಂಗ್ ಯಂತ್ರವನ್ನು ಕೂಡ್ಲಿಗಿ ತಾಲೂಕು ಪಂಚಾಯ್ತಿಗೆ ನೀಡಿತ್ತು. ಆದರೆ ನಮ್ಮಲ್ಲಿ ಬಳಕೆಯಾಗದೇ ಇರುವುದರಿಂದ ಯಂತ್ರದ ಸಣ್ಣಪುಟ್ಟ ರಿಪೇರಿಗೆ ಬಂದಿತ್ತು ಈಗಾಗಿ ಬಳಕೆಯಾಗುವ ದೃಷ್ಠಿಯಿಂದ ಪಟ್ಟಣ ಪಂಚಾಯ್ತಿಯವರಿಗೆ ಅವಶ್ಯಕತೆ ಇದೆ ಎಂದು ತಿಳಿಸಿದ್ದರು. ಈಗಾಗಿ ಪಟ್ಟಣ ಪಂಚಾಯ್ತಿಗೆ ಈ ಯಂತ್ರವನ್ನು ನೀಡಿರುತ್ತೇವೆ ಎನ್ನುತ್ತಾರೆ ಕೂಡ್ಲಿಗಿ ತಾ.ಪಂ.ಇಓ ಬಸಣ್ಣ.


ಶೌಚಗುಂಡಿಯ ತ್ಯಾಜ್ಯವನ್ನು ಎತ್ತುವ ಸಕ್ಕಿಂಗ್ ಯಂತ್ರ ನಮ್ಮ ಇಲಾಖೆಯದ್ದಲ್ಲ. ಅದು ತಾಲೂಕು ಪಂಚಾಯ್ತಿಗೆ ಸೇರಿದ್ದು ನಮಗೆ ಸಂಬಂಧವಿಲ್ಲ ಎನ್ನುತ್ತಾರೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಫಕೃದ್ದೀನ್ .