ಕಚೇರಿಯಲ್ಲಿ ಮಿತಿ ಮೀರಿದ ಮದ್ಯವರ್ತಿಗಳ ಹಾವಳಿ

ಹನೂರು:ಏ:08: ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿ ಮೀರಿದ್ದು, ಕಳೆದ ಐದಾರು ವರ್ಷಗಳಿಂದ ಒಂದಡೆ ಬೀಡು ಬಿಟ್ಟಿರುವ ಅಸಾಮಿ ರಾಜಸ್ವ ನಿರೀಕ್ಷಕ ಮಾದೇಶ್ ಮಧ್ಯವರ್ತಿಗಳಿಗೆ ಕಿಂಗ್‍ಪಿನ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ದಿನಂಪ್ರತಿ ಹತ್ತಾರು ದಲ್ಲಾಳಿಗಳ ತಂಡ ಆರ್.ಐ.ಮಾದೇಶ್‍ಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವೃಧ್ಯಾಪ ವೇತನ, ವಿಧವಾ ವೇತನ, ಜಮೀನಿನ ಖಾತೆ ಇನ್ನಿತರೆ ಸಾರ್ವಜನಿಕ ಕೆಲಸ ಕಾರ್ಯಗಳು ಸರಾಗವಾಗಿ ಮಾಡಲು ಕಪ್ಪವನ್ನು ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.
ಆದರೆ ಮುಗ್ಧ ಅಮಾಯಕ ರೈತರು ಮತ್ತು ಸಾರ್ವಜನಿಕರು ತಮ್ಮ ಕೆಲವನ್ನು ಮಾಡಿಕೊಳ್ಳಲು ಬರೊಬ್ಬರಿ ತಿಂಗಳು ಗಟ್ಟಲೇ ಕಛೇರಿ ಅಲೆಯ ಬೇಕಾಗಿದ್ದು, ಅವರ ಚಪ್ಪಲಿ ಸವೆಯಬೇಕು. ಅದೇ ದಲ್ಲಾಳಿಗಳ ಮೂಲಕ ಹೋದರೆ ಕೇವಲ ಒಂದೆರಡು ದಿನಗಳಲ್ಲಿ ಕೆಲಸ ಆಗುತ್ತಿದ್ದು, ದಲ್ಲಾಳಿಗಳು ಸಾರ್ವಜನಿಕರಿಂದ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದಾರೆ, ಇದರಲ್ಲಿ ಆರ್.ಐ.ಮಾದೇಶ್‍ಗೆ ಇಂತಿಷ್ಟು ಪಾಲು ಹೋಗುತ್ತದೆ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿದೆ.
ಆರ್.ಐ.ಮಾದೇಶ್ ಕೂಡ ಹನೂರು ಸಮೀಪದ ಬಂಡಳ್ಳಿ ಗ್ರಾಮದವನಾಗಿದ್ದು, ಈತ ಸ್ಥಳಿಯ ಪ್ರಭಾವ ಬಳಸಿ ಖಾತೆ ಬದಲಾವಣೆ, ಇನ್ನಿತರೆ ಜಮೀನಿನ ವ್ಯವಹಾರಕ್ಕೆ ಲಕ್ಷ ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎನ್ನಲಾಗುತ್ತಿರುವ ಮಾತುಗಳು ಕೇಳಿ ಬರುತ್ತಿದೆ. ದಲ್ಲಾಳಿಗಳ ಮುಖಾಂತರವಲ್ಲದೇ ನೇರ ವೃಧ್ಯಾಪ ವೇತನದಂತ ಅನೇಕ ಅನುಕೂಲಗಳನ್ನು ಪಡೆಯಲು ಲಂಚವನ್ನು ನೀಡಿದರೆ ಮಾತ್ರ ಆ, ಪೈಲ್ ಮುಂದಕ್ಕೆ ಹೋಗುವುದು ಇಲ್ಲದಿದ್ದರೆ ಒಂದಲ್ಲ ಒಂದು ಕಾರಣ ನೀಡಿ ವಜಾ ಮಾಡುವುದನ್ನು ಮಾಡುತ್ತಾರೆ ಎನ್ನಲಾಗಿದೆ. 40 ರಿಂದ 50 ವರ್ಷದ ಒಳಗಿನ ವಯೋಮಾನದವರಿಗೆ ಅಕ್ರಮವಾಗಿ ವೃದ್ಯಾಪ ವೇತನವನ್ನು ಸಹ ಮಾಡಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ ನೂರಾರು ವೃದ್ಯಾಪ ವೇತನಗಳನ್ನು ಮಾಡಿಕೊಡಲಾಗಿದ್ದು, ಇದೆಲ್ಲವೂ ಮಧ್ಯವರ್ತಿಗಳ ದಂಧೆಯಿಂದ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಟ್ಟಾರೆ ಹನೂರು ತಾಲ್ಲೂಕು ರಾಜಸ್ವ ನಿರೀಕ್ಷಕರ ಕಛೇರಿ ದಲ್ಲಾಳಿ ಮತ್ತು ಭ್ರಷ್ಟರ ಕೂಪವಾಗಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಶಾಸಕರು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.
ತಹಶೀಲ್ದಾರ್ ಮತ್ತು ಡಿ.ಟಿ.ಗಳು ರಬ್ಬರ್ ಸ್ಟಾಂಪ್: ತಾಲ್ಲೂಕು ಕಛೇರಿಯಲ್ಲಿ ಆಡಳಿತ ನಡೆಸಬೇಕಾದ ತಹಶೀಲ್ದಾರ್ ಮತ್ತು ಡಿ.ಟಿ.ಗಳು ಇಲ್ಲಿನ ಕುಲಗೆಟ್ಟ ವ್ಯವಸ್ಥೆಯಿಂದ ನಾಮಕಾವಸ್ತೆಗೆ ಇದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ರಾಜಸ್ವ ನಿರೀಕ್ಷಕ ಮಾದೇಶ್ 6 ವರ್ಷಗಳಿಂದಲೂ ಒಂದಡೆ ಜಾಂಡ ಹೂಡಿದ್ದು, ಮತ್ತೊಬ್ಬ ಮಹಾಶಯ ಭೂ ಮಾಪನ ಶಾಖೆಯ ಸರ್ವೇ ಸೂಪರ್‍ವೈಸರ್ ಜೆ.ಕುಮಾರಸ್ವಾಮಿ ಬರೊಬ್ಬರಿ 19 ವರ್ಷಗಳಿಂದ ಒಂದಡೇ ಬೀಡು ಬಿಟ್ಟಿದ್ದು ಇವರುಗಳು ತಮ್ಮ ಜೇಷ್ಠತೆಯ ಆಧಾರದ ಮೇರೆಗೆ ತಹಶೀಲ್ದಾರ್ ಮತ್ತು ಡಿ.ಟಿ.ಗಳನ್ನು ಅಕ್ಷರಶಃ ರಬ್ಬರ್‍ಸ್ಟಾಂಪ್‍ಗಳನ್ನಾಗಿ ಮಾಡಿಕೊಂಡು ತಮ್ಮ ಕರಾಮತ್ತನ್ನು ತೋರಿಸುತ್ತಾ ಒಟ್ಟಾರೆ ಇಲ್ಲಿನ ಅಧಿಕಾರಿಗಳನ್ನು ಕೀ ಕೊಟ್ಟ ಗೊಂಬೆಯಂತೆ ಆಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.