ಕಗ್ಗೋಡ ಸಿದ್ದಲಿಂಗೇಶ್ವರ ಮಠದಲ್ಲಿ ಮಾಧವಾನಂದ ಶ್ರೀಗಳಿಂದ ಲೋಕಕಲ್ಯಾಣಕ್ಕಾಗಿ ಒಂಟ ಕಾಲಿನಲ್ಲಿ ಅನುಷ್ಠಾನ

ವಿಜಯಪುರ, ಆ.4-ತಾಲೂಕಿನ ಕಗ್ಗೋಡ ಗ್ರಾಮದ ಸಿದ್ದಲಿಂಗೇಶ್ವರ ಮಹಾರಾಜರ ಮಠದಲ್ಲಿ ಶ್ರೀಮಠದ ಸದ್ಗುರು ಮಾಧವಾನಂದ ಮಹಾರಾಜರು ದಿನಾಂಕ 29 ರಿಂದ ಲೋಕಕಲ್ಯಾಣಕ್ಕಾಗಿ ಒಂಟ ಕಾಲಿನಲ್ಲಿ ನಿರಂತರ ಮೌನ ಮತ್ತು ಉಪವಾಸವಿದ್ದು ಅನುಷ್ಠಾನ ಕೈಗೊಂಡಿದ್ದಾರೆ.
ಶ್ರಾವಣ ಮಾಸ ಮುಗಿಯುವವರೆಗೂ ನಿರಂತರ 42 ದಿನಗಳ ಕಾಲ ಶ್ರೀಗಳ ಅನುಷ್ಠಾನ ಮುಂದುವರೆಯಲಿದೆ. ಕಳೆದ ಹಲವು ವರ್ಷಗಳಿಂದ ಶ್ರಾವಣ ಮಾಸದಲ್ಲಿ ಪ್ರತಿ ವರ್ಷ 42 ದಿನ ಮಾಧವಾನಂದ ಮಹಾರಾಜರು ಲೋಕಕಲ್ಯಾಣಕ್ಕಾಗಿ ಶ್ರೀಮಠದಲ್ಲಿ ಮೌನ ಹಾಗೂ ಉಪವಾಸ ವೃತ ಆಚರಿಸುತ್ತ ಬಂದಿದ್ದು ಇರುತ್ತದೆ. ಈ ವರ್ಷ ವಿಶೇಷವಾಗಿ ಒಂಟ ಕಾಲಿನಲ್ಲಿ ನಿಂತು ಲೋಕಕ್ಕೆ ಬಂದಿರುವ ಕಷ್ಟಗಳು ದೂರವಾಗಿ ಸಕಲ ಜೀವರಾಶಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂಬ ಸಂಕಲ್ಪದಿಂದ ನಿರಂತರ ಉಪವಾಸ ಮತ್ತು ಮೌನ ಅನುಷ್ಠಾನ ಮಾಡುತ್ತಿದ್ದಾರೆ.
ಶ್ರೀಗಳ ಅನುಷ್ಠಾನವನ್ನು ನೋಡಿ ದರ್ಶನ ಪಡೆಯಲು ಕಗ್ಗೋಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಸಿದ್ದಲಿಂಗೇಶ್ವರ ಮಠಕ್ಕೆ ಬರುತ್ತಿದ್ದಾರೆ. ಶ್ರೀಗಳು ಈ ಅನುಷ್ಠಾನ ಕೈಗೊಳ್ಳುವಾಗ ಶ್ರೀಮಠದ ಭಕ್ತರಾದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗರಾಜ ಅಥರ್ಗಾ ಕಲ್ಯಾಣಪ್ಪ ಉಕಮನಾಳ, ಸೋಮಪ್ಪ ತಳವಾರ, ಈರಪ್ಪ ದೊಡಮನಿ, ಬಾಬು ತಳವಾರ, ಅಶೋಕ ದೊಡಮನಿ, ಈರಪ್ಪ ತುಳಜಪ್ಪಗೋಳ, ಶ್ರೀಶೈಲ ಹತ್ತರಕಿ, ಹಣಮಂತ ಮುಳಸಾವಳಗಿ, ಧರೆಪ್ಪ ತಡವಲಗಾ, ಮಹಾದೇವ ಮುಳವಾಡ, ರಾಚಯ್ಯ ಹಿರೇಮಠ, ಶೇಖಪ್ಪ ಡೋಣೂರ, ಬಸವರಾಜ ಬಂಡಿವಡ್ಡರ, ಮಾರುತಿ ಜಗತಾಪ ಸೇರಿದಂತೆ ಕಗ್ಗೋಡ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.