ಕಕ್ಷಿದಾರರ ಸಮಸ್ಯೆ ಆಲಿಸಿ ಸರಿಯಾದ ಸಮಯಕ್ಕೆ ತೀರ್ಪು ನೀಡಲು ಸಲಹೆ

ದಾವಣಗೆರೆ.ಮೇ.೨೨; ನ್ಯಾಯ ಕೇಳಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗದೆ ನಿಗದಿತ ಅವಧಿಯಲ್ಲಿ ಕಕ್ಷಿದಾರರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಎಲ್ಲಾ ವಕೀಲರು ಮುಂದಾಗಬೇಕು ಎಂದು ದಾವಣಗೆರೆ 2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಹೆಚ್. ರೇಷ್ಮ ತಿಳಿಸಿದರು.ದಾವಣಗೆರೆ ನಗರದ ಜಿಲ್ಲಾ ವಕೀಲರ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ನೂತನವಾಗಿ ವರ್ಗಾವಣೆಯಾಗಿ ಬಂದಿರುವ ನ್ಯಾಯಾಧೀಶರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ನ್ಯಾಯ ಕೇಳಿಕೊಡು ಕಕ್ಷಿದಾರರು ನಮ್ಮಲ್ಲಿಗೆ ಬರುತ್ತಾರೆ. ಕಾರಣ ವಕೀಲರು ಯಾವುದೇ ಪ್ರಕರಣಗಳಲ್ಲಿ ವಿಳಂಬ ಮಾಡದೆ ತಕ್ಷಣವೇ ಅವಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದು ಅವುಗಳ ವಿಲೇವಾರಿಗೆ ಮುಂದಾಗಬೇಕು ಎಂದು ಕರೆ ನೀಡಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸದಸ್ಯ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿ ಬಂದಿರುವ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಮಹಾವೀರ್ ಮಾತನಾಡಿ ಕಾನೂನು ಅರಿವಿನ ಜೊತೆಗೆ ನ್ಯಾಯ ದಾನ ಮಾಡುವ ಕೆಲಸ ನನ್ನದಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಕಲಾಪಗಳ ಜೊತೆಯಲ್ಲಿ ಸಾರ್ವಜನಿಕರಿಗೆ ಕಾನೂನಿನ ಅರಿವನ್ನು ಮೂಡಿಸುತ್ತೇನೆ. ಅಲ್ಲದೆ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ರಾಜೇಶ್ವರಿ ಎನ್ ಹೆಗಡೆ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಉಪಸ್ಥಿತರಿದ್ದರು.