ಕಂಬಾರಗಣವಿ ಸೇತುವೆ ಸಮಸ್ಯೆ ಪರಿಹಾರ: ಸಚಿವರ ಭರವಸೆ


ಧಾರವಾಡ,ಜು23 : ಕಂಬಾರ ಗಣವಿ ಗ್ರಾಮದ ಸೇತುವೆ ಮಳೆಯಿಂದ ಮುಳುಗಡೆಯಾದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕಂಬಾರಗಣವಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.

ಧಾರವಾಡ ಜಿಲ್ಲೆಯ ಅಳ್ಳಾವರ ತಾಲೂಕಿನ ಕಂಬಾರ ಗಣವಿ ಗ್ರಾಮದ ಸೇತುವೆ ಸಮಸ್ಯೆಯಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಈಗಲಾದರೂ ನಮ್ಮ ಗ್ರಾಮಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣ ಮಾಡಬೇಕು ಎಂದು ಜನರು ಆಗ್ರಹಿಸಿದ್ದರು

ಚುನಾವಣೆ ಸಂದರ್ಭದಲ್ಲಿ ನಮ್ಮ ಗ್ರಾಮಕ್ಕೆ ಸುಸಜ್ಜಿತ ಸೇತುವೆ ನಿರ್ಮಾಣ ಮಾಡುತ್ತೇವೆ ಎಂದು ಸಂತೋಷ ಲಾಡ್ ಭರವಸೆ ನೀಡಿದ್ದರು. ಈಗ ಅವರು ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ ಎಂದು ಸ್ಥಳೀಯರು ಆಶಾಭಾವನೆ ವ್ಯಕ್ತಪಡಿಸಿದರು.

ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಕಂಬಾರ ಗಣವಿ ಗ್ರಾಮದ ಜನರ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತೇನೆ. ಸುಸಜ್ಜಿತ ಸೇತುವೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ತಿಳಿಸಿದರು.

ಕಂಬಾರ ಗಣವಿ ಗ್ರಾಮದ ಬಹುದಿನಗಳ ಸಮಸ್ಯೆ ನಿವಾರಣೆಗೆ ಸಚಿವ ಸಂತೋಷ ಲಾಡ್ ಇಚ್ಚಾಶಕ್ತಿಯಿಂದ ಕಾರ್ಯ ನಿರ್ವಹಿಸುತ್ತಾರಾ ಎಂಬುದನ್ನು ಕಾಯ್ದು ನೋಡಬೇಕಾಗಿದೆ.