ಕಂಬದ ಲಕ್ಷ್ಮೀನರಸಿಂಹಸ್ವಾಮಿ ಅದ್ಧೂರಿ ರಥೋತ್ಸವ

ಹೊಸಕೋಟೆ, ಮಾ.೯- ಕಳೆದ ವರ್ಷಗಳಲ್ಲಿ ಕೊರೋನಾ ಮಹಾಮಾರಿಯಾಗಿ ಕಾಡಿದ ಪರಿಣಾಮ ಗ್ರಾಮಗಳಲ್ಲಿ ಆಚರಣೆ ಮಾಡಲಾಗುತ್ತಿದ್ದ ಗ್ರಾಮದೇವತೆ ಹಬ್ಬ, ರಥೋತ್ಸವಗಳಂತಹ ಧಾರ್ಮಿಕ ಆಚರಣೆಗಳಿಗೆ ಮಂಕು ಕವಿದಿತ್ತು. ಆದರೆ ಆ ವೈಭವ ಮರುಕಳಿಸಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ನಿತೀಶ್ ಪುರುಷೋತ್ತಮ್ ತಿಳಿಸಿದರು.
ತಾಲೂಕಿನ ಯನಗುಂಟೆ ಗ್ರಾಮದ ಕಂಬದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆದ ೩೫ ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಷ್ಟರ ಸಂಹಾರಕ್ಕಾಗಿ ಶ್ರೀಮನ್ನಾರಾಯಣ ಹಲವಾರು ಅವತಾರ ತಾಳುತ್ತಾನೆ. ಅದರಲ್ಲೂ ಉಗ್ರ ಅವತಾರಿಯಾಗಿ ದುಷ್ಟರನ್ನು ಸದೆಬಡಿಯುವ ನರಸಿಂಹನ ಅವತಾರಕ್ಕೆ ಪುರಾಣಗಳಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ. ಇಂತಹ ನರಸಿಂಹ ಸ್ವಾಮಿ ದೇವಾಲಯವನ್ನು ಯನಗುಂಟೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿ ವಿಶೇಷವಾಗಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿರುವುದು ಶ್ಲಾಘನೀಯ. ಅದರಂತೆ ಪ್ರತಿ ವರ್ಷ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಗ್ರಾಮದ ಒಳಿತಿಗೆ ಪೂರಕವಾಗಿದೆ ಎಂದರು.
ದೇವಾಲಯದ ಅರ್ಚಕ ಸುಬ್ರಮಣಿ ಮಾತನಾಡಿ ಕಂಬದ ನರಸಿಂಹ ಸ್ವಾಮಿ ದೇವಾಲಯ ಪಶ್ಚಿಮಾಭಿಮುಖವಾಗಿ ಒಂದೇ ಕಂಬದಲ್ಲಿ ೪ ದೇವರುಗಳಿರುವುದು ಇಲ್ಲಿನ ವಿಶೇಷವಾಗಿದೆ. ಆನಾದಿ ಕಾಲದಿಂದಲೂ ಗ್ರಾಮದೇವರಾಗಿ ನೆಲಸಿರುವ ನರಸಿಂಹಸ್ವಾಮಿಯ ಆರಾಧನೆ ಪ್ರತಿವರ್ಷದ ಕಾಮನ ಹುಣ್ಣಿಮೆ ದಿನದಂದು ಅದ್ದೂರಿಯಾಗಿ ನೆಡೆಯುತ್ತಿದ್ದು ಈ ವರ್ಷವು ಗ್ರಾಮದ ಎಲ್ಲಾ ಜನರು ಒಗ್ಗಟ್ಟಿನಿಂದ ಸೇರಿ ಹಬ್ಬದ ಮಾಧರಿಯಲ್ಲಿ ಆಚರಣೆ ಮಾಡುತ್ತಿರುವುದು ಹರ್ಷದ ವಿಚಾರ ಎಂದರು.
ಆಚರಣೆ ಅಂಗವಾಗಿ ಸುಮಾರು ೧೦ ಸಾವಿರ ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ದೇವಾಲಯದ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು, ತಾಲ್ಲೂಕಿನ ಸಾವಿರಾರು ಭಕ್ತರು ದೇವರ ದರ್ಶನ ಪಡೆದುಕೊಂಡರು.