ಕಂಬಕ್ಕೆ ಬೈಕ್ ಡಿಕ್ಕಿ ಇಬ್ಬರ ಸಾವು

ಬೆಂಗಳೂರು,ಸೆ.೨೨-ಕಂಠಪೂರ್ತಿ ಕುಡಿದು ಹೆಲ್ಮೆಟ್ ಧರಿಸದೇ ಅತಿ ವೇಗವಾಗಿ ದುಬಾರಿ ಇಲ್ಲದೆ ದುಬಾರಿ ೨೦ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಬಿಎಂಡಬ್ಲ್ಯೂ ಬೈಕ್ ನಲ್ಲಿ ಕಂಬಕ್ಕೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಯಶವಂತ ಪುರದ ಆರ್‌ಎಂಸಿ ಯಾರ್ಡ್ ಬಳಿ ಇಂದು ನಸುಕಿನಲ್ಲಿ ನಡೆದಿದೆ.ಬನಶಂಕರಿಯ ಮನಮೋಹನ್ (೩೧) ನಿಖಿಲ್( ೨೫) ಮೃತಪಟ್ಟವರು,ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ.ಸ್ನೇಹಿತರ ಜೊತೆ ಮದ್ಯದ ಪಾರ್ಟಿ ಮುಗಿಸಿ ಇಬ್ಬರು ಕಂಠಪೂರ್ತಿ ಕುಡಿದು ಮನೆಗೆ ಮುಂಜಾನೆ ೩.೩೦ರ ವೇಳೆ ಮನೆಗೆ ಬಿಎಂಡಬ್ಲ್ಯೂ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೇ ಅತಿ ವೇಗವಾಗಿ ಹೋಗುತ್ತಿದ್ದರು.ಮಾರ್ಗ ಮಧ್ಯದ ಯಶವಂತಪುರದ ಆರ್‌ಎಂಸಿ ಯಾರ್ಡ್ ರಸ್ತೆಯಲ್ಲಿ ನಿಯಂತ್ರಣ ಸಿಗದೆ ಬೈಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಇಬ್ಬರೂ ಬೈಕ್‌ನಿಂದ ದೂರಕ್ಕೆ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಡಿಸಿಪಿ ಸಚಿನ್ ಘೋರ್ಪಡೆ ತಿಳಿಸಿದ್ದಾರೆ.
ಆಟೋ ಚಾಲಕ ಸಾವು:
ಆಟೋ ಚಾಲಕನ ಮೇಲೆ ಟಿಪ್ಪರ್ ಹರಿದು ಚಾಲಕ ಸಾವಿಗೀಡಾದ ಘಟನೆ ಕೋಲಾರ ತಾಲೂಕಿನ ಮಡೇರಹಳ್ಳಿಯ ರಾ.ಹೆ ೭೫ರ ಗೇಟ್ ಬಳಿ ನಡೆದಿದೆ.
ಸೂಲೂರು ಗ್ರಾಮದ ನಿವಾಸಿಯಾದ ಧನುಷ್ (೨೯) ಮೃತ ಚಾಲಕನಾಗಿದ್ದಾನೆ ರಿಕ್ಷಾಗೆ ಟಿಪ್ಪರ್ ಹಿಂಬದಿಯಿಂದ ಡಿಕ್ಕಿ ಹೊಡೆದು, ಚಾಲಕನ ಮೇಲೆ ಹರಿದಿದೆ. ರಸ್ತೆಯ ಮೇಲೆಯೇ ಮೃತ ಚಾಲಕನ ದೇಹ ನಜ್ಜು ಗುಜ್ಜಾಗಿದೆ.ಟಿಪ್ಪರ್ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದು ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ