ಕಂಪ್ಲಿ: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಇವರಿಗೆ ಮಾತ್ರ ಹೊಟ್ಟೆ ತುಂಬಾ ಎಣ್ಣೆ ಇರಲೇಬೇಕು..!?

ಕಂಪ್ಲಿ ಜೂ 07 : ಮೇ.7ರಿಂದ ಅಗತ್ಯ ವಸ್ತುಗಳ ಖರೀದಿಗಾಗಿ ಅನುವು ಮಾಡಿಕೊಟ್ಟ ಹಿನ್ನೆಲೆ ಸೋಮವಾರ ಬೆಳ್ಳಂಬೆಳಗ್ಗೆ ಜನರು ದಿನನಿತ್ಯ ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರೆ ಮದ್ಯಪ್ರಿಯರು ಮಾತ್ರ ಮದ್ಯದಂಗಡಿಗಳಿಗೆ ಮುಗಿಬಿದ್ದು ಬಿರುಸಾಗಿ ಮದ್ಯ ಖರೀದಿ ಮಾಡಿದರು.
ಸಂಪೂರ್ಣ ಬಂದ್ ಮಾಡಲಾಗಿದ್ದ ಕಾರಣ ಪಟ್ಟಣದಾದ್ಯಂತ ಅಕ್ರಮ ಮದ್ಯ ಮಾರಾಟಗಾರರಿಗೆ ಎಲ್ಲಿಲ್ಲದ ಲಾಭ ಒಲಿದುಬಂದಿತ್ತು. ಎಂಎಸ್‍ಐಎಲ್‍ಗಳಲ್ಲಿ ಲಭ್ಯವಾಗುವ ದರಕ್ಕಿಂತ ದುಪ್ಪಟ್ಟು ಹಾಗು ಮೂರು ಪಟ್ಟು ಹೆಚ್ಚಿನ ದರಗಳಿಗೆ ಮದ್ಯ ಮಾರಾಟ ಮಾಡುತ್ತಿದ್ದ ಕಾರಣ ಮದ್ಯಪ್ರಿಯರು ಬಹುಶಃ ರೋಸಿ ಹೋದಂತಿದ್ದರು. ಇದೇ ಕಾರಣಕ್ಕೆ ಸೋಮವಾರ ಬೆಳಗ್ಗೆ ಮದ್ಯದಂಗಡಿಗಳು ತೆರೆಯುತ್ತಿದ್ದಂತೆ ಮದ್ಯಪ್ರಿಯರು ಮುಗಿಬಿದ್ದು ತಮ್ಮ ನೆಚ್ಚಿನ ಮದ್ಯವನ್ನು ಖರೀದಿ ಮಾಡಿದರು. ಆದರೆ ಹೀಗೆ ಖರೀದಿಗೆ ಮುಂದಾದವರಿಗೆ ಆರಂಭದಲ್ಲಿ ಮದ್ಯ ದಾಸ್ತಾನು ಖಾಲಿಯಾಗಿದೆ ಎನ್ನುವ ಮದ್ಯದಂಗಡಿ ಸಿಬ್ಬಂದಿಗಳ ಮಾತುಗಳನ್ನು ಕೇಳಿದ ಮದ್ಯಪ್ರಿಯರಿಗೆ ಶಾಕ್ ಎದುರಾದಂತಾಗಿತ್ತು. ಬಳಿಕ ಸ್ಟಾಕ್ ಬರುತ್ತಿದ್ದಂತೆ ಅದೆಲ್ಲಿ ಖಾಲಿಯಾಗಿಬಿಡುತ್ತೋ ಎನ್ನುವ ಆತಂಕದಲ್ಲಿ ನಾ ಮುಂದು ತಾ ಮುಂದು ಎಂದು ಸಾಮಾಜಿಕ ಅಂತರವನ್ನೂ ಮರೆತು ಮುಗಿಬಿದ್ದು ಮದ್ಯ ಖರೀದಿಸಿದರು. ಮಧ್ಯ ಖರೀದಿಗಾಗಿ ಮದ್ಯಪ್ರಿಯರು ಮುಗಿಬಿದ್ದ ರೀತಿ ಹಾಗು ಮದ್ಯದ ಮೇಲಿನ ಅವರ ಪ್ರೀತಿ, ವ್ಯಾಮೋಹ ಕಂಡ ಮದ್ಯದಂಗಡಿ ಸಿಬ್ಬಂದಿ ಮಾತ್ರ ಚಿತ್ ಆಗಿದ್ದಂತು ಸುಳ್ಳಲ್ಲ.
ಒಟ್ಟಾರೆಯಾಗಿ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಹೊಟ್ಟೆ ತುಂಬಾ ಎಣ್ಣೆ ಬೇಕೇ ಬೇಕು ಎನ್ನುವ ಮನಸ್ಥಿತಿಯನ್ನು ಮದ್ಯಪ್ರಿಯರು ತಾಳಿದಂತಿದ್ದಾರೆ. ಅದ್ಯಾವ ಉದ್ದೇಶಕ್ಕಾಗಿ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ ಎನ್ನುವ ಸಾಮಾನ್ಯ ಪ್ರಜ್ಞೆಯೂ ಮದ್ಯಪ್ರಿಯರಲ್ಲಿ ಇಲ್ಲದಂತಾಗಿದೆ. ಸದ್ಯ ಇನ್ನೊಂದು ವಾರ ಸಂಪೂರ್ಣ ಬಂದ್ ಮುಂದುವರೆಯಲಿದ್ದು ಮುಂದಿನ ವಾರಕ್ಕೇನೆ ಮುಕ್ತಾಯವಾಗಲಿದ್ಯಾ ಅಥವಾ ಮುಂದುವರೆಯಲಿದ್ಯಾ ಎಂಬುದನ್ನ ಕಾದುನೋಡಬೇಕಿದೆ.