ಕಂಪ್ಲಿ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘಕ್ಕೆ ಉತ್ತಮ ಸಹಕಾರಿ ಸಂಘ ಪ್ರಶಸ್ತಿ

2ಕೋಟಿ47 ಲಕ್ಷ ರೂ. ಲಾಭ
ಶೇ.91ರಷ್ಟು ಸಾಲ ವಸೂಲಾತಿ
ಸದಸ್ಯರಿಗೆ ಡಿವಿಡೆಂಡ್ ವಿತರಣೆ

ಗಂಗಾವತಿ ನ.22: ಕಂಪ್ಲಿಯ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಗವಿಸಿದ್ದಪ್ಪ ಹೇಳಿದರು.
ನಗರದ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘದ ಬ್ಯಾಂಕಿನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೊಸಪೇಟೆಯಲ್ಲಿ ನಡೆದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮದಲ್ಲಿ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘಕ್ಕೆ ‘ಉತ್ತಮ ಸಹಕಾರ ಸಂಘ’ ಪ್ರಶಸ್ತಿ ನೀಡಲಾಗಿದೆ ಎಂದರು.
ಈಗಾಗಲೇ ಕಲಬುರಗಿ ವಿಭಾಗ ಮಟ್ಟದಲ್ಲಿ 3 ಸಲ ನಮ್ಮ ಸಂಘಕ್ಕೆ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಪಡೆದಿದೆ. 4ನೇ ಬಾರಿ ಸಂಘಕ್ಕೆ ಪ್ರಶಸ್ತಿ ಲಭಿಸಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.
ಆಗಸ್ಟ್ 8,2003ರಲ್ಲಿ ಕಂಪ್ಲಿ ಶಾಖೆ ಆರಂಭವಾಗಿದ್ದು, ಈಗಾಗಲೇ 6 ಶಾಖೆಗಳನ್ನು ಹೊಂದಿದೆ. ಸಂಘದ ಷೇರು ಬಂಡವಾಳ 3 ಕೋಟಿ 10 ಲಕ್ಷ, ನಿಧಿಗಳು 5 ಕೋಟಿ 11 ಲಕ್ಷ, ಠೇವಣಿಗಳು 41 ಕೋಟಿ 27 ಲಕ್ಷ, ಒಟ್ಟು ದುಡಿಯುವ ಬಂಡವಾಳ 55 ಕೋಟಿ 48 ಲಕ್ಷ, ಹಾಗೂ ಹೂಡಿಕೆ 14 ಕೋಟಿ 89 ಲಕ್ಷ ರೂ.ಹೊಂದಿದೆ ಎಂದರು.
35 ಕೋಟಿ 69 ಲಕ್ಷ ರೂ. ಸಾಲ ವಿತರಣೆ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳಿಗೆ 2 ಕೋಟಿ 70 ಲಕ್ಷ ರೂ. ಸಾಲ ವಿತರಿಸಲಾಗಿದೆ. ಶೇ.91 ರಷ್ಟು ಸಾಲ ವಸೂಲಾತಿಯಾಗಿದೆ. ಅಲ್ಲದೇ, ಸಂಘವು 2019-20ನೇ ಸಾಲಿನಲ್ಲಿ 2 ಕೋಟಿ47 ಲಕ್ಷ ರೂ. ಲಾಭ ಗಳಿಸಿದೆ. 2004ರಿಂದ ಪ್ರತಿವರ್ಷ ಶೇ.24 ರಂತೆ ಸದಸ್ಯರಿಗೆ ಡಿವಿಡೆಂಡ್ ವಿತರಿಸುತ್ತ ಬಂದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಕೊಟ್ರೇಶ್, ನಿರ್ದೇಶಕರಾದ ಡಿ.ವೀರಪ್ಪ, ವಾಲಿ ಕೊಟ್ರಪ್ಪ, ಕೆ.ಸಣ್ಣ ಗವಿಸಿದ್ದಪ್ಪ, ಬಣಗಾರ ಚಂದ್ರಶೇಖರ, ಕೆ.ಚನ್ನಪ್ಪ, ಸಮಿತಿಯ ಸದಸ್ಯರಾದ ಡಾ.ವೀರನಗೌಡ ಎಸ್.ಪಾಟೀಲ್, ಡಿ.ವಿನೋದÀ, ಗಂಗಾವತಿ ಶಾಖೆಯ ವ್ಯವಸ್ಥಾಪಕ ಎನ್.ವಿರೇಶ ಉಪಸ್ಥಿತರಿದ್ದರು.

2 ಲಕ್ಷ ರೂ. ದೇಣಿಗೆ
ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘವು, ವ್ಯವಹಾರ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ಮತ್ತು ಪ್ರಕೃತಿ ವಿಕೋಪ ನಿಧಿಗೆ ತಲಾ 1 ಲಕ್ಷದಂತೆ 2 ಲಕ್ಷ ರೂ. ದೇಣಿಗೆ ಕೊಡಲಾಗಿದೆ. ಉಚಿತ ನೇತ್ರ ಚಿಕಿತ್ಸೆಗಾಗಿ 25 ಸಾವಿರ ರೂ. ದೇಣಿಗೆ ನೀಡಲಾಗಿದೆ.

ಬಳ್ಳಾರಿ, ಹೊಸಪೇಟೆ ಹಾಗೂ ಸಿರಗುಪ್ಪದಲ್ಲಿ ಹೊಸ ಶಾಖೆ ಸ್ಥಾಪಿಸುವ ಗುರಿ ಹೊಂದಿದ್ದು, ಶೀಘ್ರದಲ್ಲಿಯೇ ಆರಂಭಿಸಲಾಗುವುದು.
ಹೆಚ್.ಗವಿಸಿದ್ದಪ್ಪ, ಸಂಘದ ಅಧ್ಯಕ್ಷ