ಕಂಪ್ಲಿ : ಮೂಲ ಸೌಕರ್ಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ

ಕಂಪ್ಲಿ ಜ 14 : ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಂಡವವಾಡುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಸ್ಥಳೀಯ ಯುವಕರು ಬುಧವಾರ ಸಂಜೆ ಏಕಾಏಕಿ ಆರೋಗ್ಯ ಕೇಂದ್ರದ ಜಮಾಯಿಸಿ ಪ್ರತಿಭಟನೆ ನಡೆಸಿದ ಪರಿಣಾಮ ಕೆಲ ನಿಮಿಷಗಳ ಕಾಲ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿತ್ತು.
ಜ.12ರ ಮಂಗಳವಾರ ರಾತ್ರಿ ಮಂಗಳವಾರ ರಾತ್ರಿ ಹಾವು ಕಚ್ಚಿದ ಮಾರುತಿ ಎನ್ನುವ ಯುವಕ ಚಿಕಿತ್ಸೆಗಾಗಿ ಕಂಪ್ಲಿಯ ಸರ್ಕಾರಿ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಲು ಸಿಬ್ಬಂದಿ ಇರಲಿಲ್ಲ. ಸರಿಸುಮಾರು 45 ನಿಮಿಷಗಳ‌ ಕಾಲ ಚಿಕಿತ್ಸೆಗಾಗಿ ಕಾದು ಕೂತಿದ್ದರು ಚಿಕಿತ್ಸೆ ದೊರಕಲಿಲ್ಲ. ಅನಿವಾರ್ಯವಾಗಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟೊತ್ತಿಗಾಗಲೆ ಹಾವು ಕಡಿತಕ್ಕೊಳಗಾದ ಯುವಕನ ದೇಹದ ಸ್ಥಿತಿ ತೀವ್ರ ಗಂಭೀರವಿದ್ದು ತುರ್ತಾಗಿ ಗಂಗಾವತಿಗೆ ಆಕ್ಸಿಜನ್ ಇರುವ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವಂತೆ ಸಲಹೆ ನೀಡಲಾಗಿತ್ತು. ಆದರೆ, ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿದ್ದ 108 ಅಂಬ್ಯಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾಗ ಅಕ್ಸಿಜನ್ ವ್ಯವಸ್ಥೆ ಇಲ್ಲದ ಕಾರಣ ಮಾರ್ಗ ಮಧ್ಯೆ ಯುವಕ ಸಾವಿಗೀಡಾದ್ದಾನೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ತಾಸು ಕರ್ತವ್ಯ ನಿರ್ವಹಿಸುವ ಪಾಳೆಯ ವೈದ್ಯರು,ಶುಶ್ರೂಷಕರು ಹಾಗು ಸಿಬ್ಬಂದಿ, ಆಸ್ಪತ್ರೆಯಲ್ಲಿ ಅವಶ್ಯವಿರುವ ತುರ್ತು ಮೂಲಸೌಲಭ್ಯ ಸೇರಿದಂತೆ ಆಕ್ಸಿಜನ್ ವ್ಯವಸ್ಥೆಯುಳ್ಳ ಅಂಬ್ಯಲೆನ್ಸ್ ಒದಗಿಸಬೇಕು ಎಂದು ಪ್ರತಿಭಟನಾನಿರತ ಯುವಕರಾದ ಪುಟ್ಟಿ ಸಚಿನ್, ಕಾರ್ತಿಕ್ ಸೇರಿದಂತೆ ಅನೇಕರು ಆಗ್ರಹಿಸಿದರು.
ಮಾರುತಿ ಎನ್ನುವ ಯುವಕ ಸಾವನ್ನಪ್ಪಿದ ಹಿನ್ನೆಲೆ ಏಕಾಏಕಿಯಾಗಿ ಆಸ್ಪತ್ರೆ ಬಳಿ ಸುಮಾರು 450ಕ್ಕೂ ಹೆಚ್ಚು ಯುವಕರು ಜಮಾಯಿಸಿ ಪ್ರತಿಭಟಿಸಿದರು. ಪ್ರತಿಭಟನೆ ಹಿನ್ನೆಲೆ ಆಸ್ಪತ್ರೆ ಬಳಿ ಕೆಲ ನಿಮಿಷಗಳ ಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಮಧ್ಯಪ್ರವೇಶಿಸಿದ ಪಿಎಸ್ ಐ ಮೌನೇಶ್ ರಾಥೋಡ್ ಹಾಗು ಪೊಲೀಸ್ ಸಿಬ್ಬಂದಿ ಪ್ರತಿಭಟನಾನಿರತ ಯುವಕರನ್ನು ಚದುರಿಸುವಲ್ಲಿ ಹಾಗು ಆಕ್ರೋಶಗೊಂಡ ಯುವಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಆಸ್ಪತ್ರೆ ಬಳಿ ಏಕಾಏಕಿ ಸೃಷ್ಟಿಯಾದ ಪ್ರತಿಭಟನಾ ಹೈಡ್ರಾಮಾ ಬಳಿಕ ಕಂದಾಯ ನಿರೀಕ್ಷಕ ಎ.ಗಣೇಶ್ ಅವರಿಗೆ ಪ್ರತಿಭಟನಾನಿರತ ಯುವಕರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿ.ಬಸವರಾಜ, ಕೆ.ಮುತ್ತಣ್ಣ, ಎಚ್.ಸಂದೀಪ್, ಸೂರಿ ಇತರರಿದ್ದರು.