ಕಂಪ್ಲಿ: ಬ್ಯಾಂಕ್ ವ್ಯವಹಾರ ಬಂದ್ ; ತಗ್ಗಿದ ಹಳ್ಳಿಗರ ಸಂಚಾರ

ಕಂಪ್ಲಿ ಜೂ.02 ರಿಂದ ಸತತ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಗೆ ಜಿಲ್ಲಾಡಳಿತ ಆದೇಶಿಸಿರುವ ಹಿನ್ನೆಲೆ ಪಟ್ಟಣದ ರಸ್ತೆಗಳಲ್ಲಿ ಬುಧವಾರದಂದು ಭಾಗಶಃ ಜನಸಂಚಾರ ತಗ್ಗಿದ್ದು, ಪೊಲೀಸರಲ್ಲಿ ಕೊಂಚ ನಿರಾಳ ಭಾವ ಮೂಡಿಸಿದಂತಿತ್ತು.
ಸಾಮಾನ್ಯ ರಜೆ ದಿನಗಳನ್ನೊರತುಪಡಿಸಿ ಇನ್ನುಳಿದ ದಿನಗಳಲ್ಲಿ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿದ್ದ ಕಾರಣ ದಿನನಿತ್ಯ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನತೆ ಹೆಚ್ಚಾನುಹೆಚ್ಚಾಗಿ ಪಟ್ಟಣ ಬ್ಯಾಂಕ್ ಶಾಖೆಗಳಿಗೆ ಧಾವಿಸುತ್ತಿದ್ದರು. ಇದರಿಂದ ಬ್ಯಾಂಕ್ ಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದರು. ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವ ಸಮಯದಲ್ಲಿ ಬ್ಯಾಂಕ್ ಕೆಲಸದ ನೆಪವನ್ನೆ ಹೇಳಿಕೊಂಡು ಸಾಕಷ್ಟು ಜನರು ಅನಾವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಣ ಪೊಲೀಸರಿಗೆ ತಲೆಬೇನೆ ಸೃಷ್ಟಿಯಾಗಿತ್ತು.ಯಾಕೆಂದರೆ ಸರ್ಕಾರದಿಂದಲೇ ಬ್ಯಾಂಕ್ ಕಾರ್ಯ ಚಟುವಟಿಕೆಗಳಿಗೆ ಅನುಮತಿಸಿದ್ದ ಕಾರಣ ಜನಸಂಚಾರ ತಗ್ಗಿಸೋದು ಪೊಲೀಸರಿಗೆ ದೊಡ್ಡ ತಲೆಬೇನೆ ಸೃಷ್ಟಿಸಿತ್ತು. ಆದರೆ, ಇದೀಗ ಜಿಲ್ಲಾಡಳಿತವು ಎಲ್ಲಾ ಸರ್ಕಾರಿ ಹಾಗು ಖಾಸಗಿ ಬ್ಯಾಂಕ್ ಗಳಿಗೆ ಮೂರು ದಿನ ಕಾಲ ಕಾರ್ಯಸ್ಥಗಿತಗೊಳಿಸುವ ಆದೇಶ ಮಾಡಿರುವುದರಿಂದ ಅನಗತ್ಯವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ನಿಯಂತ್ರಿಸುವಲ್ಲಿ ಪೊಲೀಸರಿಗೆ ಅನುಕೂಲವಾದಂತಿತ್ತು.
ಬುಧವಾರ ಬೆಳಗ್ಗೆಯಿಂದಲೇ ಪೊಲೀಸರು ತಮ್ಮ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದು ರಸ್ತೆಗಿಳಿವ ಬಹುತೇಕ ವಾಹನ ಸಂಚಾರಿಗಳನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು. ಸಕಾರಣವಿರುವ ಜನರ ಸಂಚಾರಕ್ಕಷ್ಟೇ ಅನುವು ಮಾಡಿಕೊಟ್ಟು, ಬಾಲಿಶ ಉತ್ತರವನ್ನು ನೀಡಿ ಕುಚೇಷ್ಟೆ ಮಾಡಲು ರಸ್ತೆಗಿಳಿದವರಿಗೆ ಪೊಲೀಸರು ಬಿಸಿ ಬಿಸಿ ಕಜ್ಜಾಯ ಕೊಟ್ಟು ವಾಹನ ಸೀಜ್ ಮಾಡುವ ತಾಕೀತು ಮಾಡಿ ಮನೆಗಳಿಗೆ ಕಳುಹಿಸಿದರು.
ಬ್ಯಾಂಕ್ ಬಂದ್- ಜನರ ಓಡಾಟಕ್ಕೂ ಬ್ರೇಕ್:
ಹೌದು… ತಾತ್ಕಾಲಿಕವಾಗಿ ಬ್ಯಾಂಕ್ ಗಳ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಹಿನ್ನೆಲೆ ಪ್ರತಿನಿತ್ಯ ಗಿಜಿಗುಡುತ್ತಿದ್ದ ಪಟ್ಟಣದ ಅಂಬೇಡ್ಕರ್ ವೃತ್ತ ರಸ್ತೆ, ಕುರುಗೋಡು ರಸ್ತೆ, ಪೇಟೆ ಬಸವೇಶ್ವರ ದೇವಸ್ಥಾನ ರಸ್ತೆ, ಮಾರುಕಟ್ಟೆ ರಸ್ತೆ, ಗಂಗಾನಗರ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳೆಲ್ಲವು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಬ್ಯಾಂಕ್ ಬಂದಾದ್ರು ಎಟಿಎಂಗಳಿಗೆ ಮುಗಿಬಿದ್ದ ಜನರು:
ಹೌದು… ಇತ್ತ ಬ್ಯಾಂಕ್ ಗಳು ತಾತ್ಕಾಲಿಕವಾಗಿ ಕಾರ್ಯ ಸ್ಥಗಿತಗೊಳಿಸಿದ ಹಿನ್ನೆಲೆ ಬ್ಯಾಂಕ್ ಗಳನ್ನು ಬಿಟ್ಟು ಎಟಿಎಂ ಮಷೀನ್ ಗಳಿಗೆ ಜನರು ಮುಗಿಬಿದ್ದ ಸನ್ನಿವೇಶಗಳು ಕೆಲವೆಡೆಗಳಲ್ಲಿ ಕಂಡು ಬಂದವು. ಹಾಗೆ ಎಟಿಎಂಗಳಿಗೆ ಮುಗಿಬಿದ್ದವರಲ್ಲಿ ಬಹುತೇಕ ಅಗತ್ಯವಿರುವ ವ್ಯಕ್ತಿಗಳಿಗಿಂತ ಹೊರಗೆ ತಿರುಗಾಡುವ ಸಲುವಾಗಿ ಬಂದ ಪಡ್ಡೆ ಹುಡುಗರೇ ಹೆಚ್ಚಿದ್ದರು. ಇನ್ನು ಬಹುತೇಕ ಪಟ್ಟಣದ ಮೆಡಿಕಲ್ ಶಾಪ್ ಗಳಲ್ಲಿ ಔಷಧಿ ಖರೀದಿಗಾಗಿ ಜನಸಂದಣಿ ಏರ್ಪಟ್ಟ ದೃಶ್ಯಗಳು ಸಾಮಾನ್ಯವೆಂಬಂತಿತ್ತು.
ಒಟ್ಟಾರೆಯಾಗಿ, ಕೊರೋನಾ ಸೋಂಕು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮೂರು ದಿನಗಳ ಕಾಲ ತಾತ್ಕಾಲಿಕವಾಗಿ ಬ್ಯಾಂಕ್ ಚಟುವಟಿಕೆಗಳು ಸ್ಥಗಿತಗೊಳಿಸಿದ ಹಿನ್ನೆಲೆ ಇಲ್ಲಿನ ಪ್ರಮುಖ ರಸ್ತೆಗಳೆಲ್ಲವು ಖಾಲಿ ಖಾಲಿ ಹೊಡೆಯುತ್ತಿದ್ದವು. ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಅಥವಾ ಜಿಲ್ಲಾಡಳಿತವು ನಾನಾ ಮಾರ್ಗಗಳಲ್ಲಿ ಚಿಂತನೆ ನಡೆಸಿ ಹೊಸ ಹೊಸ ಆದೇಶಗಳನ್ನು ಹೊರಗೆಡವುತ್ತಲೆ ಇದೆ. ಆದರೆ, ಈ ಆದೇಶಕ್ಕಿಂತ ಹೆಚ್ಚಾಗಿ ಸಾರ್ವಜನಿಕರು ತಮ್ಮ ಆರೋಗ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅನಾವಶ್ಯಕ ಮನೆಯಿಂದ ಹೊರಬಾರದ ರೀತಿಯಲ್ಲಿ ಪ್ರಬುದ್ಧತೆಯಿಂದ ತಮ್ಮ ಜವಾಬ್ದಾರಿ ಮೆರೆದಲ್ಲಿ ಭಾಗಶಃ ಸೋಂಕಿನ ಪ್ರಮಾಣ ತಾನಾಗಿಯೇ ತಗ್ಗುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ ಅಂತಲೇ ಹೇಳಬಹುದು.