ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಆಗ್ರಹಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ : ಕೆ ಎಸ್ ಚಾಂದ್ ಭಾಷ

ಕಂಪ್ಲಿ ಮಾ 22 : ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಬೇಕೆನ್ನುವ ಹಿನ್ನೆಲೆಯಲ್ಲಿ ಕಾನೂನು ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನ ಉಚ್ಛನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಹೋರಾಟ ತೀವ್ರಗೊಳಿಸಲಾಗುವುದು ಎಂದು ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕನ್ನು ಸೇರಿಸುವ ಕಾನೂನು ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಚಾಂದ್ ಭಾಷಾ ತಿಳಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಆಗಿರುವ ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಹಲವು ಹೋರಾಟದ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ವಿಜಯನಗರ ಜಿಲ್ಲೆ ಅಧಿಕೃತವಾಗಿ ಘೋಷಣೆಯಾಗಿದ್ದು, ಕಂಪ್ಲಿ ಜನತೆಯ ಹೋರಾಟಗಳನ್ನು ಮನ್ನಿಸದ ರಾಜ್ಯ ಸರ್ಕಾರ ಕೊನೆಗೂ ಕಂಪ್ಲಿ ತಾಲೂಕನ್ನು ನೂತನ ಜಿಲ್ಲೆಯಿಂದ ಕೈಬಿಡಲಾಗಿದ್ದು ನಿಜಕ್ಕೂ ಖಂಡನೀಯ. ಭೌಗೋಳಿಕವಾಗಿ ಹಾಗೂ ವಿಜಯನಗರ ಸಾಮ್ರಾಜ್ಯದ ಇತಿಹಾಸದ ನಂಟು ಹೊಂದಿರುವ ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂಬ ಹಿನ್ನೆಲೆ ಕಾನೂನು ಹೋರಾಟ ಕೈಗೊಳ್ಳಲಾಗಿದೆ. ಈ ಹಿಂದೆ ಕೊಪ್ಪಳ ಜಿಲ್ಲೆಗೆ ಸೇರಿದ್ದ ಸಿಂಧನೂರು ತಾಲೂಕನ್ನು ಕಾನೂನು ಹೋರಾಟದ ಮೂಲಕ ರಾಯಚೂರು ಜಿಲ್ಲೆಗೆ ಸೇರಿಸಲಾಗಿತ್ತು ಎಂಬುದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಅಂತೆಯೇ ಕಂಪ್ಲಿ ತಾಲೂಕನ್ನು ಕಾನೂನು ಹೋರಾಟದೊಂದಿಗೆ ವಿಜಯನಗರ ಜಿಲ್ಲೆಗೆ ಸೇರಿಸಲು ಮುಂದಾಗಿದ್ದೇವೆ. ನುರಿತ ವಕೀಲರೊಂದಿಗೆ ಸುಧೀರ್ಘವಾಗಿ ಚರ್ಚಿಸಿ, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸಬೇಕೆಂದು ಕಂಪ್ಲಿ ತಾಲೂಕು ಕಾನೂನು ಹೋರಾಟ ಸಮಿತಿಯಿಂದ ಮಾ.19ರಂದು ಬೆಂಗಳೂರಿನ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ನಿರಂತರವಾಗಿ ಕಾನೂನು ಹೋರಾಟ ಮಾಡಲು ಕಂಪ್ಲಿ ಜನತೆಯ ಸಹಾಯ, ಸಹಕಾರ ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಕಾನೂನು ಹೋರಾಟ ಸಮಿತಿಯ ಗೌರವಾಧ್ಯಕ್ಷ ಪಿ.ಬ್ರಹ್ಮಯ್ಯ, ಉಪಾಧ್ಯಕ್ಷ ಜಿ.ರಾಮಣ್ಣ, ಕಾರ್ಯದರ್ಶಿ ಬಿ.ಸಿದ್ದಪ್ಪ, ಖಜಾಂಚಿ ಸೈಯದ್ ಉಸ್ಮಾನ್, ಕಾರ್ಯಕಾರಣಿ ಸಮಿತಿ ಸದಸ್ಯರಾದ ವಿ.ಗೋವಿಂದರಾಜು, ಭಾಸ್ಕರ್ ರೆಡ್ಡಿ, ಹಬೀಬ್ ರೆಹಮಾನ್, ಭಾವೈಕ್ಯ ವೆಂಕಟೇಶ, ಬಿ.ದೇವೇಂದ್ರ, ಸಿ.ಆರ್.ಹನುಮಂತ, ಬಿ.ನಾಗೇಂದ್ರ, ಕರೇಕಲ್ ಮನೋಹರ, ವರದಿ ಜಾಫರ್, ಭಗವಾನ್ ಸಿಂಗ್, ವಿ.ವೆಂಕಟರಮಣ ಸೇರಿದಂತೆ ಅನೇಕರು ಹಾಜರಿದ್ದರು.