
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.18: ಜಿಲ್ಲೆಯ ಕಂಪ್ಲಿ ತಹಶೀಲ್ದಾರ್ ಕಚೇರಿ ಮುಂದೆ ಮಾ.20ರಂದು ಯುವಜನರ ಉದ್ಯೋಗದ ಹಕ್ಕಿಗಾಗಿ ಪ್ರತಿಭಟನಾ ಧರಣಿಯನ್ನು ಡಿವೈಎಫ್ಐ ನಡೆಸಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಯು.ಎಱ್ರಿಸ್ವಾಮಿ ತಿಳಿಸಿದ್ದಾರೆ.
ಈ ಕುರಿತಂತೆ ತಹಶೀಲ್ದಾರರ ಮುಖಾಂತರ ದೇಶದ ಪ್ರಧಾನಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ದೇಶದ ಅಭಿವೃದ್ಧಿ ಮಂತ್ರ ಸದಾ ಜಪಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವವು ದೇಶದ ಬಹುದೊಡ್ಡ ಸಮಸ್ಯೆ ನಿರುದ್ಯೋಗ ಸಮಸ್ಯೆ ಇತ್ಯರ್ಥಪಡಿಸುತ್ತಿಲ್ಲ. ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್‌ಯು) ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರಕಾರ ಲೋಕಸಭೆಯಲ್ಲಿ ನೀಡಿದ ಮಾಹಿತಿಯಂತೆ ಕೇಂದ್ರ ಸರ್ಕಾರದಡಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಕರ್ನಾಟಕದಲ್ಲಿಯೇ 2.5 ಲಕ್ಷ ಹುದ್ದೆಗಳು ಖಾಲಿ ಇವೆ!
2018 ರ ಮಾಹಿತಿಯ ಪ್ರಕಾರ, 30.75 ಲಕ್ಷ ಹುದ್ದೆಗಳು ಖಾಲಿ ಇವೆ ಅದರಲ್ಲಿ ಕೇಂದ್ರ ಸರ್ಕಾರ, ರೈಲ್ವೆ, ಮಂಡಳಿಗಳು ಮತ್ತು ಬ್ಯಾಂಕುಗಳಲ್ಲಿ 7,21,665 ಹುದ್ದೆಗಳು, ಉನ್ನತ ಶಿಕ್ಷಣ ಇಲಾಖೆಯಲ್ಲಿ 1,60,688 ಹುದ್ದೆಗಳು, ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ – 10,08,005, ಆರೋಗ್ಯ – 4,45,675, ಪೊಲೀಸ್ ಮತ್ತು ರಕ್ಷಣಾ – 1,95,939, ರಾಜ್ಯ ಪೊಲೀಸ್ ಪಡೆಗಳು – 5,38,237, ನ್ಯಾಯಾಂಗ ಇಲಾಖೆಯಲ್ಲಿ 5,525 ಹುದ್ದೆಗಳು ಖಾಲಿ ಇವೆ ಎಂದು ಆಯೋಗ ತಿಳಿಸಿದೆ.
ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ: 2018-19 ರ ವರದಿ ಪ್ರಕಾರ ಒಂದು ಸಾವಿರ ಜನರಲ್ಲಿ 37 ಜನ ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದ 51 & ಗ್ರಾಮೀಣ ಭಾಗದಲ್ಲಿ 27 ಜನ ಇದಾರೆ. ಪ್ರತಿ ಸಾವಿರ ಮಹಿಳೆಯರಲ್ಲಿ ಒಟ್ಟಾರೆ 28 ಮಹಿಳೆಯರು ನಿರುದ್ಯೋಗಿಗಳಿದ್ದಾರೆ. ನಗರ ಪ್ರದೇಶದಲ್ಲಿ 61 & ಗ್ರಾಮೀಣ ಭಾಗದಲ್ಲಿ 14 ರಷ್ಟು ಜನರಿದ್ದಾರೆ.
ಉದ್ಯೋಗ ನಾಶ: ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ವರದಿ ಪ್ರಕಾರ ಲಾಕ್ ಡೌನ್ ನಿಂದಾಗಿ 6% ಇದ್ದ ನಿರುದ್ಯೋಗ 20% ರಷ್ಟಾಗಿದೆ. 2020 ಏಪ್ರಿಲ್ ನಲ್ಲಿ ನಿರುದ್ಯೋಗ ದರ 26.3% ಏರಿಕೆಯಾಗಿ 29.8% ತಲುಪಿದೆ. ರಾಷ್ಟ್ರೀಯ ನಿರುದ್ಯೋಗ ಸರಾಸರಿ 23.5% ಇದ್ದಾಗ ರಾಜ್ಯದ ನಿರುದ್ಯೋಗ 29.8%ಕ್ಕೆ ಏರಿಕೆಯಾಗಿದೆ. ಇದು 2019 ರಲ್ಲಿ 0.5 ಇತ್ತು.
ಕೌಶಲ್ಯ ಕರ್ನಾಟಕ ಡಾಟ್ ಕಾಮ್ ನಲ್ಲಿ (18-50 ವಯಸ್ಸಿನ) ಒಟ್ಟು 10,71,038 ಜನ ನೋಂದಾಯಿಸಿದ್ದಾರೆ. (ಮಹಿಳೆಯರು-4,36,415 & ಪುರುಷರು6,34,633) ಎಂಬುದಾಗಿ ಸರಕಾರದ ಆರ್ಥಿಕ ಸಮೀಕ್ಷೆ 2020-21 ರ ವರದಿ ಇದೆ. ಇದು ಪ್ರತಿವರ್ಷ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತದೆ.
ಸ್ಥಳೀಯರಿಗೆ ದೊರೆಯದ ಉದ್ಯೋಗ:ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲು ಸರಕಾರಕ್ಕೆ ಶಿಫರಸ್ಸು ನೀಡಿದ್ದ ಸರೋಜಿನಿ ಮಹಿಷಿ ಶಿಫಾರಸ್ಸುಗಳನ್ನು ಸರಕಾರಗಳು ನಿರ್ಲಕ್ಷಿಸಿರುವ ಪರಿಣಾಮವಾಗಿ, ಪ್ರಸ್ತುತವಿರುವ ಸಾರ್ವಜನಿಕ, ಖಾಸಗಿ ಒಡೆತನದ ಉದ್ಯಮಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರನ್ನು ನೇಮಿಸಿಕೊಳ್ಳುತ್ತಿರುವುದು ವ್ಯಾಪಕವಾಗಿದೆ. ಆದ್ದರಿಂದ ಮಾ.20ರಂದು
ಉದ್ಯೋಗದ ಹಕ್ಕಿಗಾಗಿ, ರಾಜ್ಯವ್ಯಾಪಿ ಯುವಜನರ ಪ್ರತಿಭಟನೆ ನಡೆಸುತ್ತಿದೆ ಇದರ ಪ್ರಯುಕ್ತ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪ್ರತಿಭಟಿಸಲಿದೆ ಎಂದು ಡಿವೈ ಎಫ್ಐ ಜಿಲ್ಲಾಧ್ಯಕ್ಷರು ಯು ಎರ್ರಿಸ್ವಾಮಿ ಹೆಚ್. ಸ್ವಾಮಿ ಕಂಪ್ಲಿ ತಾಲೂಕು ಮುಖಂಡರು ಭೀಮ ಲಿಂಗ ಗೋಪಾಲ್ ನಾರಾಯಣಸ್ವಾಮಿ, ಬಸವ ರಾಜ್ ಪಿ, ಮಲ್ಲಿಕಾರ್ಜುನ, ಎಂ ಚನ್ನಬಸಯ್ಯ, ಮಂಜುನಾಥ
ಪ್ರಹ್ಲಾದ್ ನಾಯಕ್ ತಿಳಿಸಿದ್ದಾರೆ.