ಕಂಪ್ಲಿ ಠಾಣೆಗೆ ಎಸ್.ಪಿ. ಭೇಟಿ

ಕಂಪ್ಲಿ ಡಿ 16 :ತಾಲೂಕಿನ 10 ಗ್ರಾಪಂಗಳ ಚುನಾವಣೆ ಹಿನ್ನೆಲೆ ಇಲ್ಲಿನ ಪೊಲೀಸ್ ಠಾಣೆಗೆ ಮಂಗಳವಾರ ಸಂಜೆ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಭೇಟಿ ನೀಡಿ ಚುನಾವಣಾ ಸಿದ್ಧತೆ ಬಗ್ಗೆ ಮಾಹಿತಿ ಪಡೆದು, ಕಡತ ಪರಿಶೀಲನೆ ನಡೆಸಿದರು.
ಗ್ರಾಪಂ ಚುನಾವಣೆ ಹಿನ್ನೆಲೆ ತಾಲೂಕಿನ ನಂ.3 ಸಣಾಪುರ, ಸುಗ್ಗೇನಹಳ್ಳಿ, ದೇವಸಮುದ್ರ, ದೇವಲಾಪುರ, ನಂ.10 ಮುದ್ದಾಪುರ, ರಾಮಸಾಗರ ಸೇರಿ ಒಟ್ಟು 10 ಗ್ರಾಪಂಗಳ ಚುನಾವಣೆಗೆ ಸಂಬಂಧಿಸಿದಂತೆ ಸೂಕ್ಷ್ಮ, ಅತಿಸೂಕ್ಷ್ಮ‌ ಮತಗಟ್ಟೆಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಇನ್ನು ಡಿ. 22ಕ್ಕೆ ಮೊದಲನೇ ಹಂತದಲ್ಲಿ ಜರುಗಲಿರುವ ಕಂಪ್ಲಿ ತಾಲೂಕು ವ್ಯಾಪ್ತಿಯ 10 ಗ್ರಾಪಂ ವ್ಯಾಪ್ತಿಗೊಳಪಡುವ ಗ್ರಾಮಗಳಲ್ಲಿ ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶ ನೀಡದೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ಶಾಂತಿಯುತ ಮತದಾನವನ್ನು ಗಮನದಲ್ಲಿರಿಸಿಕೊಂಡು ಸಮರ್ಪಕ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಥಳೀಯ ಠಾಣಾ ಅಧಿಕಾರಿಗಳಿಗೆ ಮಾರ್ಗದರ್ಶನ ಹಾಗೂ ಸೂಚನೆ ನೀಡಿದರು.
ಬಳಿಕ ಕಂಪ್ಲಿ ಪೊಲೀಸ್ ಠಾಣೆಯ ಆವರಣ ಕಿರಿದಾಗಿದ್ದು, ಸುಸಜ್ಜಿತ ಆವರಣವುಳ್ಳ ಠಾಣೆಗಾಗಿ ನೂತನ ಕಟ್ಟಡ ನಿರ್ಮಿಸುವ ಪ್ರಸ್ತಾವನೆ ಬಂದಿದ್ದು, ಮುಂಬರುವ ಒಂದು ವರ್ಷದೊಳಗೆ ನೂತನ ಠಾಣಾ ಕಟ್ಟಡ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಎಸ್ಪಿ ಅವರು ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಂಪಿ ಡಿವೈಎಸ್ ಪಿ ಕಾಶಿಗೌಡ, ಕಂಪ್ಲಿ ಠಾಣಾ ಸಿಪಿಐ ಸುರೇಶ ಎಚ್ ತಳವಾರ, ಪಿಎಸ್ ಐ ಮೌನೇಶ್ ಉ ರಾಥೋಡ್, ಕ್ರೈಂ ವಿಭಾಗದ ಪಿಎಸ್ ಐ ಬಸಪ್ಪ ಲಮಾಣಿ, ಎಎಸ್ ಐ ಸಿ.ಪರಶುರಾಮ್ ಸೇರಿದಂತೆ ಸಿಬ್ಬಂದಿ ಅನೇಕರಿದ್ದರು.