ಕಂಪ್ಲಿ ಜನತೆಗೆ ಕೊಟ್ಟ ಮಾತಿನಂತೆ ಸಕ್ಕರೆ ಕಾರ್ಖಾನೆ ನಿರ್ಮಾಣ : ಮಾಜಿ ಶಾಸಕ ಸುರೇಶ್‍ಬಾಬು

ಕಂಪ್ಲಿ ಮಾ 27 : ಕಂಪ್ಲಿಯಲ್ಲಿ ಸಕ್ಕರೆ ಕಾರ್ಖಾನೆ ಪುನರ್‍ಸ್ಥಾಪನೆ ಮಾಡುವಂತೆ 2008ರಲ್ಲಿಯೇ ಇಲ್ಲಿನ ಜನತೆ ನನಗೆ ಒತ್ತಾಯಿಸಿದ್ದರು. ಆಗ ನೀಡಿದ ಭರವಸೆಯಂತೆ ಇದೀಗ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್‍ಬಾಬು ಹೇಳಿದರು.
ಪಟ್ಟಣದ ಸಕ್ಕರೆ ಕಾರ್ಖಾನೆಯ ಕೋದಂಡರಾಮ ದೇವಸ್ಥಾನ ಆವರಣದಲ್ಲಿ ಶುಕ್ರವಾರದಂದು ಜರುಗಿದ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.
ಕಂಪ್ಲಿ ಸಕ್ಕರೆ ಕಾರ್ಖಾನೆಯ ಜಾಗ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರು ಪ್ರತಿಕ್ರಿಯಿಸಿ, ಹಳೆಯ ಸಕ್ಕರೆ ಕಾರ್ಖಾನೆ ಜಾಗದಲ್ಲಿಯೇ ಇದೀಗ ನೂತನ ಕಾರ್ಖಾನೆ ನಿರ್ಮಾಣವಾಗುತ್ತಿದೆ. ಕಾರ್ಖಾನೆ ಜಾಗಕ್ಕೆ ಸಂಬಂಧಿಸಿದಂತೆ ಹಾಲಿ ಶಾಸಕ ಜೆ ಎನ್ ಗಣೇಶ್ ಅವರಿಗೆ ಯಾವುದೇ ಸಂಶಯವಿದ್ದಲ್ಲಿ ದಾಖಲೆ ಸಮೇತ ಬಹಿರಂಗ ಚರ್ಚೆಗೆ ನಾನು ಸಿದ್ಧ. ಈ ಹಿಂದೆ ನಾನು ಕಂಪ್ಲಿ ಜನತೆಗೆ ಕೊಟ್ಟ ಭರವಸೆಯಂತೆ ಸಕ್ಕರೆ ಕಾರ್ಖಾನೆ ಪುನರ್‍ಸ್ಥಾಪನೆ ಕಾಮಗಾರಿ ಜರುಗುತ್ತಿರುವುದು ಹಾಲಿ ಶಾಸಕರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಕಾರ್ಖಾನೆ ಜಾಗವನ್ನು ಕಬಳಿಸುವ ಉದ್ದೇಶವಿಟ್ಟುಕೊಂಡು ಸುರೇಶ್‍ಬಾಬು ಕಾರ್ಖಾನೆ ಸ್ಥಾಪನೆ ಕಾಮಗಾರಿಗೆ ಮುಂದಾಗಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಆ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಮಾತನಾಡಿ, ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಆದರೆ ಈ ಕಾಯ್ದೆಗಳ ಬಗ್ಗೆ ವಿಪಕ್ಷಗಳು ತಪ್ಪು ಮಾಹಿತಿ ನೀಡುವ ಮೂಲಕ ರೈತರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ಕೇಂದ್ರ ಸರ್ಕಾರ ಜಾರಿತಂದಿರುವ ನೂತನ ಕೃಷಿ ಕಾಯ್ದೆಗಳ ಹಿಂದಿನ ಮಹತ್ವ ಅರಿಯುವ ಮೂಲಕ ಸರ್ಕಾರದ ನಿರ್ಧಾರಗಳಿಗೆ ರೈತರು ಬೆಂಬಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳಾದ ಎನ್.ಚಂದ್ರಕಾಂತ್‍ರೆಡ್ಡಿ, ಹೂವಣ್ಣ, ಶಶಿಧರಗೌಡ, ಶ್ರೀಕಾಂತ್ ರೆಡ್ಡಿ, ಡಿ ಕೃಷ್ಣಂರಾಜು, ಕಂಬತ್ ಮಂಜುನಾಥ, ಪ್ರಮುಖರಾದ ಪಿ.ಬ್ರಹ್ಮಯ್ಯ, ಜಿ.ಸುಧಾಕರ್, ಕೊಡಿದಲರಾಜು ಸೇರಿದಂತೆ ಕಾರ್ಯಕರ್ತರನೇಕರು ಪಾಲ್ಗೊಂಡಿದ್ದರು.