ಕಂಪ್ಲಿ: ಗೋನಾಳ್ ಗ್ರಾಮದಲ್ಲಿ
ಕಲುಷಿತ ನೀರು ಸೇವನೆ ಬಾಲಕಿ ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.25: ಕಲುಷಿತ ನೀರು ಸೇವನೆಯಿಂದ  ಬಾಲಕಿಯೊಬ್ಬಳು ಸಾವನ್ನಪ್ಪಿರುವ  ಘಟನೆ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಇಂದು ನಡೆದಿದೆ.
ಗ್ರಾಮದಲ್ಲು ಪಂಚಾಯ್ತಿಯಿಂದ ನಲ್ಲಿಯಲ್ಲಿ ಸರಬರಾಜು ಮಾಡಿದ ಕಲುಷಿತ ನೀರು ಕುಡಿದು ಗ್ರಾಮದಲ್ಲಿ ಈಗಾಗಲೇ  20ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಅಸ್ವಸ್ಥರಾಗಿ, ಶಾಲೆಯಲ್ಲಿ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಇಂದು ಸುಕನ್ಯ (11) ಬಾಲಕಿ ಅಸು ನೀಗಿದ್ದಾಳೆ. ಇಂದು ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಆಕೆ ಮೃತ ಪಟ್ಟಿದ್ದಾಳೆ.
ಕಲುಷಿತ ನೀರು ಕುಡಿದು ಅಸ್ವಸ್ಥಳಾದ ಬಾಲಕಿ ಮೃತ ಪಟ್ಟಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ಹರಿಯುವ ಕಲುಷಿತ ನೀರು ಗ್ರಾಪಂ ಸರಬರಾಜು ಮಾಡುವ ನಲ್ಲಿಗಳಲ್ಲಿ ಬಂದಿರುವುದರಿಂದ ಜನರಲ್ಲಿ ವಾಂತಿ-ಭೇದಿ ಪ್ರಕರಣಗಳು ಕಾಣಿಸಿಕೊಂಡಿವೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಮಕ್ಕೆ ಈಗ ಜಿಪಂ ಸಿಇಓ ಶಿವಲಿಂಗಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ದನ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.